ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಗಾರಾಟ ನಡೆಸುತ್ತಿದ್ದವರ ಮೇಲೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರ ನೇತೃತ್ವದಲ್ಲಿ ಈ ದಾಳಿ ಯಶಸ್ವಿಯಾಗಿ ನಡೆಯಿತು.
ಬಂಧಿತರನ್ನು ಭಟ್ಕಳ ತಾಲೂಕಿನ ಮುಟ್ಟಳ್ಳಿಯ ಸುಕ್ರಪ್ಪ ತಂದೆ ಕನ್ನಯ್ಯ ನಾಯ್ಕ (60) ಹಾಗೂ ಜಾಲಿಕೋಡಿಯ ಪುರುಷೋತ್ತಮ ತಂದೆ ಮಂಜುನಾಥ ನಾಯ್ಕ (36) ಎಂದು ಗುರುತಿಸಲಾಗಿದೆ. ಇವರು ಫೆಬ್ರುವಾರಿ 5ರಂದು ಗುರುವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಭಟ್ಕಳ ತಾಲೂಕಿನ ಕೋಣಾರ ಗ್ರಾಮದ ಕೆರೆಹಿತ್ತು ಅರಣ್ಯ ಪ್ರದೇಶದಲ್ಲಿ ತಮ್ಮ ಲಾಭಕ್ಕಾಗಿ ಅಕ್ರಮವಾಗಿ ಕೋಳಿ ಅಂಕ ಜೂಗಾರಾಟ ನಡೆಸುತ್ತಿದ್ದರು.
ಆರೋಪಿತರು ಹುಂಜಗಳ ಕಾಲುಗಳಿಗೆ ಕತ್ತಿಗಳನ್ನು ಕಟ್ಟಿ ಪರಸ್ಪರ ಕಾದಾಟಕ್ಕೆ ಬಿಡುತ್ತಿದ್ದು, ಆ ಕಾದಾಟದ ಮೇಲೆ ಹಣವನ್ನು ಪಂಥವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದರೆಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ, ಇಬ್ಬರು ಆರೋಪಿತರು ಸ್ಥಳದಲ್ಲೇ ಸಿಕ್ಕಿಬಿದ್ದಿದ್ದು, ಇನ್ನು ಕೆಲವರು ಕತ್ತಲನ್ನು ಬಳಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಸ್ಥಳದಿಂದ ಕೋಳಿ ಅಂಕ ಜೂಗಾರಾಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಬಂಧಿತರ ವಿರುದ್ಧ ಸಂಬಂಧಪಟ್ಟ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಪರಾರಿಯಾದ ಆರೋಪಿತರ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಅಕ್ರಮ ಜೂಜಾಟ ನಡೆಸುವುದು ಕಾನೂನುಬಾಹಿರವಾಗಿದ್ದು, ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
