ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸಿಮೆಂಟ್ ರಸ್ತೆ ಕಾಮಗಾರಿ ವೇಳೆ ಹಿಮ್ಮುಖವಾಗಿ ಚಲಿಸಿದ ಕಾಂಕ್ರೀಟ್ ಮಿಕ್ಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ದುರ್ಘಟನೆ ತಾಲೂಕಿನ ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಬೆಳಗಾವಿ ಮೂಲದ ಬಸವರಾಜ ಖಾನಪ್ಪ ಮಲ್ಲೂರು (47) ಎಂದು ಗುರುತಿಸಲಾಗಿದೆ. ಈ ಸಂಬಂಧ ಅಜೇಕ್ಸ್ (ಕಾಂಕ್ರೀಟ್ ಮಿಕ್ಸರ್) ವಾಹನದ ಚಾಲಕ ಚಂದು ಅಶೋಕಪ್ಪ ದಾವಣಗೆರೆ ವಿರುದ್ಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಲ್ಲಾಪುರದಲ್ಲಿರುವ ಎನ್‌ಪಿಸಿಐಎಲ್‌ನ ಕೈಗಾ ವಸತಿ ಗೃಹಗಳಿಗೆ ನಂದಿ ಅಸೋಸಿಯೇಟ್ಸ್ ಸಂಸ್ಥೆ ವತಿಯಿಂದ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಶುಕ್ರವಾರ ಮಧ್ಯಾಹ್ನ ಸುಮಾರು 12.50ರ ವೇಳೆಗೆ ಕೆಎ-51/ಎಂಆರ್-6831 ಸಂಖ್ಯೆಯ ಅಜೇಕ್ಸ್ ವಾಹನವನ್ನು ಚಾಲಕ ನಿರ್ಲಕ್ಷ್ಯದಿಂದ ಹಿಮ್ಮುಖವಾಗಿ ಚಲಾಯಿಸಿದ ವೇಳೆ ರಸ್ತೆ ಕಾಮಗಾರಿ ನಡೆಸುತ್ತಿದ್ದ ಬಸವರಾಜ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಪಘಾತದ ಪರಿಣಾಮ ಬಸವರಾಜ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
