ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ನಗರದ ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಪುಂಡಾಟ ಮೆರೆಯುತ್ತಿದ್ದ ವ್ಯಕ್ತಿಯ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘akkihotpiston’ ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಿದ್ದ ಆರೋಪಿಯು ಭಟ್ಕಳದ ವಿವಿಧ ಸಾರ್ವಜನಿಕ ರಸ್ತೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬೇರೆ ಬೇರೆ ಬೈಕ್‌ಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ನಡೆಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದನು. ಈ ಮೂಲಕ ಇತರ ಯುವಕರನ್ನೂ ಇಂತಹ ಕಾನೂನುಬಾಹಿರ ಮತ್ತು ಅಪಾಯಕಾರಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದ ಆರೋಪವೂ ಕೇಳಿಬಂದಿದೆ.
ಭಟ್ಕಳ ಶಹರ ಪೊಲೀಸ್ ಠಾಣೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್ ಸಚಿನ್ ಯಶವಂತರಾವ್ ಪವಾರ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಗುರುವಾರ ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾ ವೇಳೆ ಆರೋಪಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ ಈ ವಿಡಿಯೋಗಳು ಪತ್ತೆಯಾಗಿವೆ.
ಸಾರ್ವಜನಿಕರ ಜೀವ ಹಾಗೂ ವಾಹನ ಸಂಚಾರಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಬೈಕ್ ಚಲಾಯಿಸಿ, ಅದರ ವಿಡಿಯೋಗಳನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ ಮೋಟಾರು ವಾಹನ ಕಾಯ್ದೆ-1988ರ ಕಲಂ 184 ಮತ್ತು 189ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಖಾತೆದಾರನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
