ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ಮನೆ ಕಳ್ಳತನ ಪ್ರಕರಣವೊಂದನ್ನು ಭೇದಿಸಿರುವ ಭಟ್ಕಳ ಶಹರ ಪೊಲೀಸರು, ಕಳುವಾಗಿದ್ದ ₹4.50 ಲಕ್ಷ ಮೌಲ್ಯದ 29.01 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹20 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಕ್ರಮ ಕೈಗೊಂಡಿದ್ದಾರೆ.

ಭಟ್ಕಳದ ಕಿದ್ವಾಯಿ ರಸ್ತೆಯ ನಿವಾಸಿ ನಾಹಿದ್ ಅಕ್ತರ್ ಅವರು ಮೇ 8ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಮೇ 8ರ ಮುಂಜಾನೆ ಕಳ್ಳರು ಮನೆಯ ಹಿಂಬದಿಯ ಕಿಟಕಿಯ ಗಾಜು ಒಡೆದು ಒಳನುಗ್ಗಿ, ಅಲ್ಮಾರಿಯಲ್ಲಿದ್ದ ಸುಮಾರು ₹5.50 ಲಕ್ಷ ಮೌಲ್ಯದ 55 ಗ್ರಾಂ ಚಿನ್ನಾಭರಣ ಹಾಗೂ ₹10 ಸಾವಿರ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಲಾಗಿತ್ತು.

ತನಿಖೆ ವೇಳೆ ಭಟ್ಕಳದ ಬದ್ರಿಯಾ ಕಾಲೋನಿಯ ನಿವಾಸಿ ಫೌಜಾನ್ ಅಹ್ಮದ್ (21) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣವನ್ನು ಬೆಂಗಳೂರಿನ ಕೆ.ಆರ್.ರೋಡ್‌ನ ಮಣಪ್ಪುರಂ ಫೈನಾನ್ಸ್ ಶಾಖೆಯಲ್ಲಿ ಗಿರವಿ ಇಟ್ಟಿರುವುದು ಬೆಳಕಿಗೆ ಬಂದಿದೆ.

ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಗಿರವಿ ಇಡಲಾಗಿದ್ದ ₹4.50 ಲಕ್ಷ ಮೌಲ್ಯದ 29.01 ಗ್ರಾಂ ಚಿನ್ನಾಭರಣ ಹಾಗೂ ₹20 ಸಾವಿರ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಕಳುವಾದ ಆಸ್ತಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ. ಕೃಷ್ಣಮೂರ್ತಿ ಹಾಗೂ ಜಗದೀಶ್ ಎಂ., ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ. ನೇತೃತ್ವದಲ್ಲಿ ಪಿಎಸ್‌ಐ ನವೀನ್ ಎಸ್. ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಯ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.

 

 

 

Please Share: