ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ಗಣೇಶ ಚತುರ್ಥಿ ಸಂದರ್ಭದಲ್ಲಿ ಈಜಲು ತೆರಳಿದ್ದ 17 ವರ್ಷದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ತಾಲೂಕಿನ ಬನವಾಸಿ ವ್ಯಾಪ್ತಿಯ ಸುಗಾವಿ ಭಟ್ರ ಕೆರೆಯಲ್ಲಿ ನಡೆದಿದೆ.
ಸುಗಾವಿ ಗ್ರಾಮದ ಸುಜಯ ಕೃಷ್ಣ ಚೆನ್ನಯ್ಯ (17) ಮೃತ ಯುವಕ. ಸುಜಯ್ ಸೇರಿದಂತೆ ಮೂವರು ಯುವಕರು ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಸುಜಯ್ ನಡು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಆತನೊಂದಿಗೆ ತೆರಳಿದ್ದ ಇನ್ನಿಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಬನವಾಸಿ ಪೊಲೀಸರು ಆಗಮಿಸಿದ್ದು, ಶಿರಸಿ ಮಾರಿಕಾಂಬಾ ಲೈಫ್ ಗಾರ್ಡ್ ತಂಡದವರು ಕಾರ್ಯಾಚರಣೆ ನಡೆಸಿ ಕೆರೆಯಿಂದ ಸುಜಯ್ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಕುರಿತು ಬನವಾಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


