ಕರಾವಳಿ ವಾಯ್ಸ್ ನ್ಯೂಸ್ 

ರಾಮನಗರ: ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಕೆಎಸ್‌ಆರ್‌ಟಿಸಿ ಬಸ್‌ನ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ, ಬಳಿಕ ಕಲ್ಲು ತೂರಿ ಬಸ್‌ನ ಮುಂಭಾಗದ ಗಾಜು ಒಡೆದ ಘಟನೆ ನಡೆದಿದೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ.

ಮಾಹಿತಿಯ ಪ್ರಕಾರ, ಕೊಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಕೆ.ಎ.-23 ಎಫ್-1106 ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ ಖಾನಾಪುರ ಬಸ್ ನಿಲ್ದಾಣಕ್ಕೆ ಬಂದ ವೇಳೆ ಗುಂಜಿಗೆ ತೆರಳಬೇಕಿದ್ದ ಮಹಿಳೆಯೊಬ್ಬರು ಬಸ್‌ಗೆ ಹತ್ತಿದ್ದರು. ಈ ವೇಳೆ ಬಸ್ ಗುಂಜಿಯಲ್ಲಿ ನಿಲ್ಲುವುದಿಲ್ಲ ಎಂದು ಕಂಡಕ್ಟರ್ ಸ್ಪಷ್ಟಪಡಿಸಿದ್ದರು. ಆದರೂ ಮಹಿಳೆ ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದ್ದರು.

ಬಳಿಕ ಮಹಿಳೆಗೆ ಗುಂಜಿಯಿಂದ ಲೋಂಡಾವರೆಗೆ ಟಿಕೆಟ್ ನೀಡಲಾಗಿತ್ತು. ಬಸ್ ಲೋಂಡಾ ತಲುಪಿದ ನಂತರ, ಗುಂಜಿಯಲ್ಲಿ ಬಸ್ ನಿಲ್ಲಿಸದಿದ್ದ ವಿಚಾರವಾಗಿ ಮಹಿಳೆ ಕಂಡಕ್ಟರ್ ಜತೆ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಬಸ್‌ನಿಂದ ಕೆಳಗಿಳಿದ ಅವರು, ರಸ್ತೆ ಬದಿಯಲ್ಲಿದ್ದ ಕಲ್ಲನ್ನು ತೆಗೆದುಕೊಂಡು ಬಸ್‌ನ ಮುಂಭಾಗದ ಗಾಜಿಗೆ ಹೊಡೆದು ಹಾನಿಗೊಳಪಡಿಸಿದ್ದಾರೆ.

ಘಟನೆಯ ಬಳಿಕ ಬಸ್ ಅನ್ನು ರಾಮನಗರ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿತ್ತು. ಆದರೆ ಘಟನೆ ಗುಂಜಿ–ಲೋಂಡಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಲೋಂಡಾ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ದೂರು ಸಲ್ಲಿಸುವಂತೆ ಸೂಚಿಸಲಾಯಿತು. ಅಲ್ಲಿಗೆ ತೆರಳಿದಾಗ, ಔಟ್‌ಪೋಸ್ಟ್‌ನಲ್ಲಿ ಪ್ರಕರಣ ದಾಖಲಿಸುವ ಅಧಿಕಾರವಿಲ್ಲದ ಕಾರಣ ಖಾನಾಪುರ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಬೇಕೆಂದು ತಿಳಿಸಲಾಯಿತು.

ಈ ಬೆಳವಣಿಗೆಯಿಂದ ಪ್ರಯಾಣಿಕರನ್ನು ಮಧ್ಯದಲ್ಲೇ ಇಳಿಸಿ, ಅವರ ಪ್ರಯಾಣಕ್ಕೆ ಪರ್ಯಾಯ ಬಸ್ ವ್ಯವಸ್ಥೆ ಮಾಡಲಾಯಿತು. ಬಳಿಕ ಹಾನಿಗೊಳಗಾದ ಬಸ್ ಅನ್ನು ಖಾನಾಪುರ ಪೊಲೀಸ್ ಠಾಣೆಗೆ ಕೊಂಡೊಯ್ದು, ಸಂಬಂಧಿತ ಮಹಿಳೆ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಲಾಯಿತು.

 

Please Share: