ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣ ಹಾಗೂ ಬೆಳ್ಳಿ ನಾಣ್ಯ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ನಗರ ಠಾಣೆ ಪೊಲೀಸರು ಅಂತರ ಜಿಲ್ಲಾ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಮಲ್ಲಗೇನಹಳ್ಳಿಯ ಸುಶೀಲಾ ಕೋಂ ಸುರೇಶ (39) ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಸಾಯಿಲಕ್ಷ್ಮೀ ಕೋಂ ಪ್ರಭುದಾಸ (36) ಬಂಧಿತ ಆರೋಪಿಗಳು.
ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ವ್ಯಾನಿಟಿ ಬ್ಯಾಗ್ನ ಜಿಪ್ ತೆರೆದು, ಅದರಲ್ಲಿದ್ದ ಬಾಕ್ಸ್ನಿಂದ ಸುಮಾರು 18 ಗ್ರಾಂ ತೂಕದ ಬಂಗಾರದ ಶಾರ್ಟ್ ನೆಕ್ಲೆಸ್, 30 ಗ್ರಾಂ ತೂಕದ ಉದ್ದನೆಯ ಬಂಗಾರದ ಹಾರ, 2 ಗ್ರಾಂ ತೂಕದ ಬಂಗಾರದ ಉಂಗುರ ಹಾಗೂ 10 ಗ್ರಾಂ ಬೆಳ್ಳಿ ನಾಣ್ಯ ಸೇರಿದಂತೆ ಅಂದಾಜು ₹3.52 ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ತಂಡವು ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಸುಮಾರು ₹5 ಲಕ್ಷ ಮೌಲ್ಯದ 50 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಶಿರಸಿ ವೃತ್ತ ನಿರೀಕ್ಷಕ ಸಂಪತ್ ಈ.ಸಿ. ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ನರಸಿಂಹಲು ಟಿ. ಹಾಗೂ ತನಿಖಾ ಪಿಎಸ್ಐ ನಾರಾಯಣ ರಾಠೋಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಅಪರಾಧ ವಿಭಾಗದ ಸಿಬ್ಬಂದಿ ಬಸವರಾಜ ಹಗರಿ, ಕೊಟೇಶ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಸದ್ದಾಂ ಹುಸೇನ್, ರಾಜು ಎಂ., ಹನುಮಂತ ಕಬಾಡಿ, ಚನ್ನಬಸಪ್ಪ, ಶೋಭಾ ಹಾಗೂ ಕಾರವಾರ ತಾಂತ್ರಿಕ ಘಟಕದ ಉದಯ ಗುನಗಾ ಮತ್ತು ಬಬನ ಕದಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
