ಕರಾವಳಿ ವಾಯ್ಸ್ ನ್ಯೂಸ್ 

ದಾಂಡೇಲಿ: ದಾಂಡೇಲಿ–ಹಳಿಯಾಳ ಮಾರ್ಗದಲ್ಲಿ ಡೀಸೆಲ್ ಟ್ಯಾಂಕರ್ ಹಾಗೂ ಅಶೋಕ್ ಲೇಲ್ಯಾಂಡ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.

Banner Ad

ಸೋಮವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ಕರುವಿನಕೊಪ್ಪದಿಂದ ಉಳವಿಯತ್ತ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನ ಹಾಗೂ ದಾಂಡೇಲಿ ಕಡೆಯಿಂದ ಹಳಿಯಾಳದತ್ತ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಅಶೋಕ್ ಲೇಲ್ಯಾಂಡ್ ವಾಹನದಲ್ಲಿದ್ದ ಸಯಂ ಹಾಗೂ ನಾಗರಾಜ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ಯಾಂಕರ್ ಚಾಲಕ ಕೃಷ್ಣ ಅವರ ಮುಖ ಹಾಗೂ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳೀಯರು ಗಾಯಾಳುಗಳನ್ನು ತಕ್ಷಣ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಗಂಭೀರವಾಗಿ ಗಾಯಗೊಂಡ ಸಯಂ ಹಾಗೂ ನಾಗರಾಜ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕಳುಹಿಸಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆ ಬಳಿಕ ತಿಳಿದುಬರಬೇಕಿದೆ.

 

Please Share: