ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ನಾರಕೋಟಿಕ್ ಸ್ಕ್ವಾಡ್ ಬುಧವಾರ ದಾಂಡೇಲಿ ನಗರದಲ್ಲಿ ವಿಶೇಷ ತಪಾಸಣೆ ನಡೆಸಿತು.
ಸುಪಾ ಶ್ವಾನದೊಂದಿಗೆ ನಗರದಲ್ಲಿನ ವಿವಿಧ ಪ್ರಮುಖ ಸ್ಥಳಗಳಿಗೆ ತೆರಳಿದ ತಂಡವು ಪೋಸ್ಟ್ ಆಫೀಸ್, ಕೊರಿಯರ್ ಕಚೇರಿಗಳು ಹಾಗೂ ಹೋಂ ಸ್ಟೇಗಳಲ್ಲಿ ಪರಿಶೀಲನೆ ನಡೆಸಿತು. ಪಾರ್ಸೆಲ್ ಮತ್ತು ಕೊರಿಯರ್ಗಳ ಮೂಲಕ ಮಾದಕ ವಸ್ತುಗಳ ಅಕ್ರಮ ಸಾಗಣೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದಾಖಲೆಗಳು ಹಾಗೂ ಅನುಮಾನಾಸ್ಪದ ಪಾರ್ಸೆಲ್ಗಳನ್ನು ಪರಿಶೀಲಿಸಲಾಯಿತು.
ನಗರದ ಪ್ರಮುಖ ಪ್ರದೇಶಗಳಲ್ಲಿ ಶ್ವಾನದಳದ ಮೂಲಕವೂ ತಪಾಸಣೆ ನಡೆಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ಇರಿಸಿದರು. ಮಾದಕ ವಸ್ತುಗಳ ಅಕ್ರಮ ಸಾಗಣೆ, ಮಾರಾಟ ಮತ್ತು ಬಳಕೆಯನ್ನು ತಡೆಗಟ್ಟಲು ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಾದಕ ವಸ್ತುಗಳ ಅಕ್ರಮ ಸಾಗಣೆ ಅಥವಾ ಬಳಕೆಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
