ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ, ಜೂ. 20: ನಗರದ ಬಿಡ್ಕಿಬೈಲ್ ವೃತ್ತದ ಸಮೀಪ ಸಂಭವಿಸಿದ್ದ ಸ್ಕೂಟಿ–ಟ್ಯಾಕ್ಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Banner Ad

ಮೃತರನ್ನು ನಗರದ ಮರಾಠಿಕೊಪ್ಪದ ಸುಭಾಷನಗರ ನಿವಾಸಿ ವೆಂಕಟೇಶ ನಾರಾಯಣ ಬೋವಿವಡ್ಡರ (43) ಎಂದು ಗುರುತಿಸಲಾಗಿದೆ.

ಜೂನ್ 17ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ಟ್ಯಾಕ್ಟರ್ ಚಾಲಕ ನಾಗರಾಜ ಮಾರುತಿ ನಾಯ್ಕ ಅವರು ಬಿಡ್ಕಿಬೈಲ್ ವೃತ್ತದಿಂದ ಹುಬ್ಬಳ್ಳಿ ರಸ್ತೆಯ ಕಡೆಗೆ ಟ್ಯಾಕ್ಟರ್ ಚಲಾಯಿಸುತ್ತಿದ್ದರು. ಈ ವೇಳೆ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಒನ್‌ವೇ ರಸ್ತೆಯಲ್ಲಿ ಸ್ಕೂಟಿ ಚಲಾಯಿಸಿಕೊಂಡು ಬಂದ ಪರಮೇಶ್ವರ ಕನ್ನಾ ಪಿಳ್ಳೆ ಅವರ ವಾಹನ ಟ್ಯಾಕ್ಟರ್‌ನ ಎಡಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ಪರಿಣಾಮ ಸ್ಕೂಟಿ ಸವಾರ ಹಾಗೂ ಹಿಂಬದಿ ಸವಾರ ವೆಂಕಟೇಶ ಬೋವಿವಡ್ಡರ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ ಅವರಿಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 18ರಂದು ಸಂಜೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಶಿರಸಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Please Share: