ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಅಪರಾಧ ಹಿನ್ನೆಲೆ ಹಾಗೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಭಟ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರನ್ನು ಆರು ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.
ಭಟ್ಕಳದ ಮೂಸಾನಗರ ನಿವಾಸಿ ಇಸ್ಮಾಯಿಲ್ ಹವ್ವಾ (46) ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯಡಿ 2020ರಿಂದ 2025ರವರೆಗೆ ಒಟ್ಟು ಏಳು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಎರಡು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಉಳಿದ ಐದು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.
ಸದರಿ ವ್ಯಕ್ತಿಯ ಅಪರಾಧ ಚಟುವಟಿಕೆಗಳು ಸಾರ್ವಜನಿಕ ಸುರಕ್ಷತೆ, ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಪರಿಗಣಿಸಿ, ಭಟ್ಕಳ ನಗರ ಪೊಲೀಸ್ ಠಾಣೆಯವರು ಗಡಿಪಾರು ಕ್ರಮಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ, ಅಭಿಯೋಜನೆ ಮತ್ತು ಪ್ರತಿವಾದಿಗಳ ವಾದಗಳನ್ನು ಆಲಿಸಿದ ಬಳಿಕ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.
ಅದರಂತೆ, ಜೂನ್ 17, 2026ರಂದು ಹೊರಡಿಸಿದ ಆದೇಶದಂತೆ ಇಸ್ಮಾಯಿಲ್ ಹವ್ವಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಆದೇಶದ ಅನ್ವಯ ಭಟ್ಕಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರನ್ನು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಗೆ ಕರೆದೊಯ್ದು ಅಲ್ಲಿನ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.
