ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ಖ್ಯಾತ ಚರ್ಮರೋಗ ತಜ್ಞ ಡಾ. ಸುಭಾಷ್ ಎಸ್. ತಾಂಡೇಲ್ (62) ಅವರು ಮಾಜಾಳಿ ಸಮೀಪ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Banner Ad

ಅ.21ರಂದು ರಾತ್ರಿ 7.45ರ ಸುಮಾರಿಗೆ ಡಾ. ಸುಭಾಷ್ ತಾಂಡೇಲ್ ಅವರು ಹೀರೋ ಹೋಂಡಾ ಪ್ಲೆಷರ್ ದ್ವಿಚಕ್ರ ವಾಹನದಲ್ಲಿ ಕಾರವಾರದಿಂದ ಮಾಜಾಳಿ ಕಡೆಗೆ ತೆರಳುತ್ತಿದ್ದಾಗ, ಮಾಜಾಳಿಯ ಬಾಬಾ ರಾಮದೇವ ಹೋಟೆಲ್ ಸಮೀಪ ಹೆದ್ದಾರಿಯಲ್ಲಿ ಬೀದಿ ದನ ಅಡ್ಡ ಬಂದಿದೆ. ಈ ವೇಳೆ ವಾಹನದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಅವರ ತಲೆಗೆ ತೀವ್ರ ಒಳಪೆಟ್ಟು ಸೇರಿದಂತೆ ದೇಹದ ವಿವಿಧೆಡೆ ಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.

ನಿವೃತ್ತ ಖ್ಯಾತ ಚರ್ಮರೋಗ ತಜ್ಞ ಡಾ. ಸುಭಾಷ್ ಎಸ್. ತಾಂಡೇಲ್

ಡಾ. ಸುಭಾಷ್ ತಾಂಡೇಲ್ ಅವರು ಕಾರವಾರ ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್‌)ಯಲ್ಲಿಯೂ ಸೇವೆ ಸಲ್ಲಿಸಿದ್ದರು. ಚರ್ಮರೋಗ ತಜ್ಞರಾಗಿ ಗುರುತಿಸಿಕೊಂಡಿದ್ದ ಅವರು ಇತ್ತೀಚೆಗಷ್ಟೇ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು.

ಸರಳ ಸ್ವಭಾವದವರಾಗಿದ್ದ ಅವರು ತಮ್ಮ ವೈದ್ಯಕೀಯ ಸೇವೆಯ ಮೂಲಕ ಜನರ ಪ್ರೀತಿ, ಗೌರವ ಗಳಿಸಿದ್ದರು. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ತಾಂಡೇಲ್ ಅವರ ಪುತ್ರರಾಗಿದ್ದ ಡಾ. ಸುಭಾಷ್ ತಾಂಡೇಲ್ ಅವರ ನಿಧನಕ್ಕೆ ವೈದ್ಯಕೀಯ ವಲಯದಲ್ಲಿ ಹಾಗೂ ಪರಿಚಿತ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Please Share: