ಕರಾವಳಿ ವಾಯ್ಸ್ ವಿಶೇಷ 

ಕಾರವಾರ: ವಯಸ್ಸಾದ ಮೇಲೆ ಮಕ್ಕಳೇ ಆಸರೆ ಎಂಬ ನಂಬಿಕೆ. ಆದರೆ, ಎಲ್ಲರ ಬದುಕಿನಲ್ಲೂ ಆ ಆಸರೆ ಸಿಗುವುದಿಲ್ಲ. ಕೆಲವರಿಗೆ ಮಕ್ಕಳು ದೂರವಾಗುತ್ತಾರೆ; ಮತ್ತೆ ಕೆಲವರು ಕುಟುಂಬವೇ ಇಲ್ಲದೆ ಬೀದಿಗೆ ಬರುವ ಪರಿಸ್ಥಿತಿ ಎದುರಿಸುತ್ತಾರೆ. ಅಂತಹ ಹಿರಿಯರ ಕಣ್ಣೀರೊರೆಸಿ, ಅವರಿಗೆ ಮನೆಯ ಪ್ರೀತಿ–ಮಮತೆ ಮತ್ತು ನೆಮ್ಮದಿಯ ಬದುಕು ನೀಡುವ ಮಾನವೀಯ ಪ್ರಯತ್ನವೊಂದು ಕಾರವಾರದಲ್ಲಿ ಆರಂಭವಾಗಿದೆ.

ನಗರದ ನಂದನಗದ್ದ ಸಂಕ್ರಿವಾಡದಲ್ಲಿ ಆರಂಭಗೊಂಡಿರುವ ‘ಅಮ್ಮನ ಮನೆ ಸೇವಾ ಸಂಸ್ಥೆ (ರಿ)’ ಇಂದು ಕುಟುಂಬದ ಆಸರೆ ಕಳೆದುಕೊಂಡ ಅನಾಥ ವಯೋವೃದ್ಧರಿಗೆ ಆಶ್ರಯತಾಣವಾಗಿ ರೂಪುಗೊಳ್ಳುತ್ತಿದೆ. ‘ಹಿರಿಯರ ಸೇವೆಯೇ ನಮ್ಮ ಧ್ಯೇಯ’ ಎಂಬ ಆಶಯದೊಂದಿಗೆ ಸಮಾನ ಮನಸ್ಕ ಕಾರವಾರದ ಯುವಕರು ತಮ್ಮ ಶ್ರಮ, ಸಮಯ ಮತ್ತು ಸಂಪನ್ಮೂಲಗಳನ್ನು ಒಗ್ಗೂಡಿಸಿ ಆರಂಭಿಸಿರುವ ಈ ಆಶ್ರಮಕ್ಕೆ ನಾಲ್ಕು ತಿಂಗಳು ಪೂರ್ಣಗೊಂಡಿವೆ.

ಸದ್ಯ ಇಲ್ಲಿ ನಾಲ್ವರು ಅನಾಥ ವಯೋವೃದ್ಧರು ಆಶ್ರಯ ಪಡೆದಿದ್ದು, ಅವರಿಗೆ ಮನೆಯ ವಾತಾವರಣದಲ್ಲಿಯೇ ಜೀವನ ನಡೆಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಹುಬ್ಬಳ್ಳಿ, ದಾವಣಗೆರೆ ಹಾಗೂ ಕಾರವಾರದ ಹಿರಿಯರು ಇಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಸುಮಾರು 15 ಮಂದಿಗೆ ಆಶ್ರಯ ನೀಡುವ ಸಾಮರ್ಥ್ಯ ಹೊಂದಿರುವ ಆಶ್ರಮದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಥ ಹಿರಿಯರಿಗೆ ಆಸರೆಯಾಗುವ ಉದ್ದೇಶ ಹೊಂದಲಾಗಿದೆ.

ಮನೆಯಂತೆಯೇ ಎಲ್ಲ ಸೌಲಭ್ಯ

ಅಮ್ಮನ ಮನೆಯಲ್ಲಿ ಹಿರಿಯರಿಗೆ ಕೇವಲ ತಂಗಲು ಸ್ಥಳ ನೀಡುವುದಷ್ಟೇ ಅಲ್ಲದೆ, ಅವರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಚೇರಿ, ವಿಶಾಲ ಹಾಲ್, ಅಡುಗೆ ಕೋಣೆ, ರೆಸ್ಟ್‌ರೂಮ್, ಗ್ರಂಥಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿವೆ. ವಾಷಿಂಗ್ ಮಷಿನ್, ಫ್ರಿಡ್ಜ್, ಟಿವಿ, ಇನ್‌ವರ್ಟರ್ ಸೇರಿದಂತೆ ಹಲವು ಸೌಲಭ್ಯಗಳು ಹಿರಿಯರ ಅನುಕೂಲಕ್ಕೆ ಇವೆ.

ಸ್ನಾನಕ್ಕೆ ಬಿಸಿನೀರು, ಊಟಕ್ಕೆ ಸಸ್ಯಾಹಾರ ಹಾಗೂ ಮಾಂಸಾಹಾರ, ಚಹಾ–ಕಾಫಿ, ಉಪಾಹಾರ ಸೇರಿದಂತೆ ಮನೆಯಲ್ಲಿರುವ ರೀತಿಯ ಆಹಾರ ವ್ಯವಸ್ಥೆ ಮಾಡಲಾಗಿದೆ. ಊಟ–ನಿದ್ರೆಗೆ ತೊಂದರೆಯಾಗದಂತೆ ಕುಕ್ ಹಾಗೂ ಕೇರ್‌ಟೇಕರ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯರ ಆರೋಗ್ಯದ ಮೇಲೂ ವಿಶೇಷ ಕಾಳಜಿ ವಹಿಸಲಾಗಿದ್ದು, ಪ್ರತಿವಾರ ಕಾರವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸುವ ವ್ಯವಸ್ಥೆ ಇದೆ.

‘ಮಕ್ಕಳಿಲ್ಲದ ನೋವು ಇಲ್ಲೀಗ ಕಾಣುತ್ತಿಲ್ಲ’

ಇಲ್ಲಿನ ವಾತಾವರಣ ಹಿರಿಯರಿಗೆ ಆಶ್ರಮಕ್ಕಿಂತಲೂ ಮನೆಯ ಅನುಭವ ನೀಡುತ್ತಿದೆ. ಕುಟುಂಬದವರಿಂದ ದೂರವಾದ ನೋವಿನೊಂದಿಗೆ ಬಂದಿದ್ದವರು ಇದೀಗ ಪರಸ್ಪರರೊಂದಿಗೆ ಬೆರೆತು ನೆಮ್ಮದಿಯ ದಿನಗಳನ್ನು ಕಳೆಯುತ್ತಿದ್ದಾರೆ.

‘ಅಮ್ಮನ ಮನೆ’ಯಲ್ಲಿ ಆಶ್ರಯ ಪಡೆದಿರುವ ವೃದ್ಧೆಯೊಬ್ಬರು ತಮ್ಮ ಭಾವನೆ ಹಂಚಿಕೊಳ್ಳುವಾಗ ಕಣ್ಣೀರಾದರು.

“ನನ್ನವರು ಯಾರೂ ಇರಲಿಲ್ಲ. ಜೀವನದ ಕೊನೆಯ ದಿನಗಳು ಹೇಗೆ ಸಾಗುತ್ತವೋ ಎಂಬ ಆತಂಕವಿತ್ತು. ಆದರೆ, ಇಂದು ಇಂತಹ ದೊಡ್ಡ ಮನೆಯಲ್ಲಿ ಸುಂದರ ಜೀವನ ಸಿಕ್ಕಿದೆ. ನಮ್ಮ ಮಕ್ಕಳಿದ್ದರೂ ಇಂತಹ ಜೀವನ ಸಿಗುತ್ತಿತ್ತೋ ಗೊತ್ತಿಲ್ಲ. ಯಾವ ಜನ್ಮದ ಬಂಧವೋ, ಯಾವ ತಾಯಿ–ಮಕ್ಕಳೋ ಗೊತ್ತಿಲ್ಲ; ನಮ್ಮಂಥವರಿಗೆ ಆಶ್ರಯ ನೀಡುತ್ತಿರುವವರು ಪುಣ್ಯದ ಕೆಲಸ ಮಾಡುತ್ತಿದ್ದಾರೆ,” ಎಂದು ಭಾವುಕರಾದರು.

ಮತ್ತೊಬ್ಬ ವೃದ್ಧೆ ಮಕ್ಕಳಿಂದ ದೂರವಾದ ನೋವನ್ನು ನೆನಪಿಸಿಕೊಂಡು, “ಸ್ವಂತ ಮಕ್ಕಳೇ ಬಿಟ್ಟು ಹೋದಾಗ ಅನಾಥೆಯಾಗಿ ಬೀದಿಗೆ ಬಂದಿದ್ದೆ. ಆದರೆ ಇಂದು ಯಾರ ತಾಯಿ–ಮಕ್ಕಳೋ ಗೊತ್ತಿಲ್ಲ, ಅವರೇ ನಮ್ಮ ಮಕ್ಕಳಾಗಿ ದೇವರಂತೆ ನಿಂತಿದ್ದಾರೆ. ಮನೆಗಿಂತಲೂ ನೆಮ್ಮದಿ ಇಲ್ಲಿ ಸಿಗುತ್ತಿದೆ,” ಎಂದು ಕಣ್ಣೀರಿನ ನಡುವೆ ಹೇಳಿದರು.

ಈ ಮಾತುಗಳು ‘ಅಮ್ಮನ ಮನೆ’ ಕೇವಲ ಕಟ್ಟಡವಲ್ಲ; ತಮ್ಮವರನ್ನು ಕಳೆದುಕೊಂಡವರ ಪಾಲಿಗೆ ಮತ್ತೊಂದು ಕುಟುಂಬವಾಗುವ ಪ್ರಯತ್ನ ಎಂಬುದನ್ನು ಸಾರುತ್ತವೆ.

ತಮ್ಮ ಕಷ್ಟದ ನಡುವೆಯೂ ಸಮಾಜ ಸೇವೆ

ಅಮ್ಮನ ಮನೆ ಸೇವಾ ಸಂಸ್ಥೆಯ ಹಿಂದೆ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಸಮಾನ ಮನಸ್ಕರ ತಂಡವಿದೆ. ತಮ್ಮದೇ ಆದ ಸೀಮಿತ ಸಂಪನ್ಮೂಲಗಳ ನಡುವೆಯೂ ಹಿರಿಯರ ಸೇವೆಗೆ ಮುಂದಾಗಿರುವ ಇವರ ಪ್ರಯತ್ನ ಇದೀಗ ಸಾರ್ವಜನಿಕರ ಸಹಕಾರದ ನಿರೀಕ್ಷೆಯಲ್ಲಿದೆ.

ಸಂಸ್ಥೆಯ ಅಧ್ಯಕ್ಷ ಅರುಣ ಹರ್ಕಡೆ, ಉಪಾಧ್ಯಕ್ಷ ವಿಕ್ಕಿ ದೇಶಮುಖ್, ಪ್ರಧಾನ ಕಾರ್ಯದರ್ಶಿ ಮೊಹಮದ್ ಹನಿಫ್ ಖುರೇಶಿ, ಕಾರ್ಯದರ್ಶಿ ಶ್ರೀಪಾದ ಪಾಂಡುರಂಗ ಶೇಟ್, ಜಂಟಿ ಕಾರ್ಯದರ್ಶಿ ಎಕ್ವೀಲ್ ಫರ್ನಾಂಡಿಸ್, ಗೌರೀಶ ಕಲ್ಗುಟ್ಕರ ಹಾಗೂ ಖಜಾಂಚಿ ರೋಹನ್ ನರಸಿಂಹ ರಾಯ್ಕರ್ ಅವರು ಆಶ್ರಮದ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ.

ತಮ್ಮ ವೈಯಕ್ತಿಕ ಜೀವನದ ಜವಾಬ್ದಾರಿಗಳ ನಡುವೆಯೂ ಅನಾಥ ವೃದ್ಧರಿಗೆ ಬದುಕಿನ ಕೊನೆಯ ಹಂತದಲ್ಲಿ ಪ್ರೀತಿ, ಭದ್ರತೆ ಹಾಗೂ ಗೌರವ ನೀಡಬೇಕು ಎಂಬ ಉದ್ದೇಶದಿಂದ ಈ ತಂಡ ಕಾರ್ಯನಿರ್ವಹಿಸುತ್ತಿದೆ.

ಅಮ್ಮನ ಮನೆ ಉಳಿಯಲು ಸಮಾಜದ ಕೈಜೋಡಿಸುವಿಕೆ ಅಗತ್ಯ

ಒಬ್ಬ ವೃದ್ಧನಿಗೆ ಅನ್ನ ನೀಡುವುದು ಒಂದು ದಿನದ ಸೇವೆಯಾಗಬಹುದು. ಆದರೆ, ಅವರ ಬದುಕಿನ ಕೊನೆಯವರೆಗೂ ಆಹಾರ, ವಸತಿ, ಆರೋಗ್ಯ, ಆರೈಕೆ ಮತ್ತು ಮಾನವೀಯ ಪ್ರೀತಿ ನೀಡುವುದು ನಿರಂತರ ಜವಾಬ್ದಾರಿ. ‘ಅಮ್ಮನ ಮನೆ’ ಅಂತಹ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಇಂತಹ ಮಾನವೀಯ ಪ್ರಯತ್ನಗಳಿಗೆ ಸಮಾಜದ ಸಹಕಾರ ದೊರೆತರೆ ಇನ್ನಷ್ಟು ಅನಾಥ ಹಿರಿಯರಿಗೆ ಆಶ್ರಯ ಕಲ್ಪಿಸಲು ಸಾಧ್ಯವಾಗಲಿದೆ. ಅಮ್ಮನ ಮನೆಗೆ ನೆರವು ನೀಡಲು ಅಥವಾ ಸಂಸ್ಥೆಯ ಕುರಿತು ಮಾಹಿತಿ ಪಡೆಯಲು ವಿಕ್ಕಿ ದೇಶಮುಖ್–7618751472, ಮೊಹಮದ್ ಹನಿಫ್ ಖುರೇಶಿ–9008480539, ರೋಹನ್ ನರಸಿಂಹ ರಾಯ್ಕರ್–9945854955 ಸಂಪರ್ಕಿಸಬಹುದು.

ತಮ್ಮವರಿಂದ ದೂರವಾದವರ ಪಾಲಿಗೆ ‘ಅಮ್ಮನ ಮನೆ’ ಮತ್ತೊಮ್ಮೆ ಮನೆಯ ಅನುಭವ ನೀಡುತ್ತಿದೆ. ಮಕ್ಕಳಿಲ್ಲದವರಿಗೆ ಮಕ್ಕಳಾಗಿ, ಆಸರೆಯಿಲ್ಲದವರಿಗೆ ಆಸರೆಯಾಗಿ ನಿಂತಿರುವ ಈ ಪ್ರಯತ್ನಕ್ಕೆ ಸಮಾಜದ ಸಹಕಾರ ಸಿಕ್ಕರೆ, ಇನ್ನಷ್ಟು ಹಿರಿಯರ ಕಣ್ಣಲ್ಲಿ ನೆಮ್ಮದಿಯ ಬೆಳಕು ಮೂಡಬಹುದು.

 

ಅಮ್ಮನ ಮನೆ ಹೇಗಿದೆ? ಹಿರಿಯರ ಬದುಕು ಹೇಗೆ ಬದಲಾಗಿದೆ? ವಿಡಿಯೋ ನೋಡಿ!

 

 

 

 

 

 

 

 

 

Please Share: