ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ಸಂತೆ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಸುಮಾರು ₹8 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಇದ್ದ ವ್ಯಾನಿಟಿ ಬ್ಯಾಗ್ನ್ನು ಕರಾವಳಿ ಕಾವಲು ಪೊಲೀಸ್ ಠಾಣೆಯ ಸಿಬ್ಬಂದಿ ಶನಿವಾರ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಸಂಶಿ ಗ್ರಾಮದ ಸವಿತಾ ಜಯಂತ ನಾಯ್ಕ ಅವರು ಹೊನ್ನಾವರ ಸಂತೆಗೆ ಬಂದಿದ್ದ ವೇಳೆ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ₹5 ಸಾವಿರ ನಗದು ಇದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡಿದ್ದರು. ಬ್ಯಾಗ್ ಕಾಣೆಯಾಗಿರುವುದು ಗಮನಕ್ಕೆ ಬಂದ ತಕ್ಷಣ ಸಮೀಪದ ಕರಾವಳಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿದ ಪಿಎಸ್ಐ ವಿಠ್ಠಲ್ ವಡವಾನಿ ಹಾಗೂ ಪಿಎಸ್ಐ ಸುಧಾ ಅಘನಾಶನಿ ಅವರು ಕರ್ತವ್ಯದಲ್ಲಿದ್ದ ಎಎಸ್ಐ ಮನೋಜ್ ತಳೇಕರ್ ಅವರಿಗೆ ಮಾಹಿತಿ ನೀಡಿ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯ ಆರಂಭಿಸಿದರು. ಸವಿತಾ ನಾಯ್ಕ ಅವರು ಸಂಚರಿಸಿದ್ದ ಸಂತೆ ಹಾಗೂ ತರಕಾರಿ ಮಾರುಕಟ್ಟೆಯ ವಿವಿಧ ಅಂಗಡಿಗಳಲ್ಲಿ ಪೊಲೀಸರು ವಿಚಾರಣೆ ನಡೆಸಿದರು.
ಈ ವೇಳೆ ದಾಸನಕೊಪ್ಪದ ಶಫಿ ಮಹಮ್ಮದ್ ಮುಕ್ಬುಲ್ ಸಾಬ್ ಅವರ ತರಕಾರಿ ಅಂಗಡಿಯಲ್ಲಿ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದೆ. ಬಳಿಕ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಪರಿಶೀಲಿಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.
ಕಳೆದುಹೋದ ಬೆಲೆಬಾಳುವ ವಸ್ತುಗಳನ್ನು ತ್ವರಿತವಾಗಿ ಪತ್ತೆಹಚ್ಚಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


