ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಗಾಂಧೀ ಜಯಂತಿಯ ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಧಾರವಾಡದ ಚಿಕನ್ ಅಂಗಡಿ ಕಾರ್ಮಿಕರು ಹಾಗೂ ಸ್ಥಳೀಯರ ನಡುವೆ ಬಾಟಲಿ ಎಸೆದ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಹಲ್ಲೆ ಆರೋಪದವರೆಗೆ ತಲುಪಿದೆ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಎರಡೂ ಕಡೆಯ ಗಾಯಾಳುಗಳು ಕಾರವಾರ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Banner Ad

ಮುಂಬೈಯಲ್ಲಿ ಇಂಡಿಯನ್ ನೇವಿಯಲ್ಲಿ ಕೆಲಸ ಮಾಡುತ್ತಿರುವ ಅಮದಳ್ಳಿ ಟೋಲನಾಕಾದ ಇಂದೇಶ ಮಾರುತಿ ಕೊಳಂಬಕರ (27) ಅವರು ನೀಡಿದ ದೂರಿನ ಪ್ರಕಾರ, ಅ.2ರಂದು ಸಂಜೆ 5 ಗಂಟೆ ಸುಮಾರಿಗೆ ಸರ್ವೇಶ ಸೀತಾರಾಮ ಚಿಂಚಣಕರ ಅವರೊಂದಿಗೆ ಎಕ್ಟಿವಾ ಸ್ಕೂಟರ್‌ನಲ್ಲಿ ಚೆಂಡಿಯಾ ನಾಗರಮಡಿ ಫಾಲ್ಸ್‌ಗೆ ತೆರಳಿದ್ದರು.

ಅಲ್ಲಿ ಬೇರೆ ಊರಿನಿಂದ ಬಂದಿದ್ದ ಸುಮಾರು 14-15 ಮಂದಿ ಫಾಲ್ಸ್‌ನ ನೀರಿನಲ್ಲಿ ಬಾಟಲಿಗಳನ್ನು ಎಸೆಯುತ್ತಿದ್ದುದನ್ನು ಕಂಡು, ತಾನು ಸ್ಥಳೀಯನಾಗಿದ್ದು ಈ ರೀತಿ ಮಾಡಬೇಡಿ, ಇದು ಪ್ರವಾಸಿಗರು ಬರುವ ಸ್ಥಳ ಎಂದು ಇಂದೇಶ ತಿಳಿಸಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ.

ಈ ವೇಳೆ ಇಬ್ಬರು ವ್ಯಕ್ತಿಗಳು ‘ನೀನು ಯಾರು?’ ಎಂದು ಪ್ರಶ್ನಿಸಿ ಕೈಯಿಂದ ದೂಡಿದ್ದು, ಬಳಿಕ ಎಲ್ಲರೂ ಸೇರಿ ದೂಡಿ ನೆಲಕ್ಕೆ ಬೀಳಿಸಿ ಕೈ ಹಾಗೂ ಕಾಲಿನಿಂದ ಎದೆ ಮತ್ತು ಹೊಟ್ಟೆ ಭಾಗಕ್ಕೆ ಹಲ್ಲೆ ನಡೆಸಿ ತೆರಳಿದರು ಎಂದು ಆರೋಪಿಸಿದ್ದಾರೆ.

ನಂತರ ಸುಮಾರು ಒಂದು ಕಿ.ಮೀ. ಕೆಳಗೆ ಬಂದಾಗ ವಿಷಯ ತಿಳಿದು ಇಂದೇಶ ಅವರ ಅಣ್ಣ ಸ್ಥಳಕ್ಕೆ ತೆರಳಿ ಆರೋಪಿಗಳು ತಂದಿದ್ದ ಎರಡು ವಾಹನಗಳನ್ನು ನಿಲ್ಲಿಸಿದ್ದಾರೆ. ಸಂಜೆ ಸುಮಾರು 5.30ಕ್ಕೆ ಇಂದೇಶ ಕೂಡ ಅಲ್ಲಿಗೆ ಹೋದಾಗ, ಆರೋಪಿಗಳ ಪೈಕಿ ಒಬ್ಬರು ಕ್ರಿಕೆಟ್ ಬ್ಯಾಟ್‌ನಿಂದ ತಲೆಯ ಬಲಭಾಗಕ್ಕೆ ಹೊಡೆದಿದ್ದು, ಮತ್ತೊಬ್ಬರು ಕೈಮುಷ್ಠಿಯಿಂದ ಮೂಗಿಗೆ ಹೊಡೆದು ರಕ್ತದ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜಗಳ ಬಿಡಿಸಲು ಬಂದ ಅಣ್ಣನನ್ನೂ ದೂಡಿ ಅವರ ಟೀ-ಶರ್ಟ್ ಹರಿದು ಹಾಕಲಾಗಿದೆ ಎಂದು ಇಂದೇಶ ಆರೋಪಿಸಿದ್ದಾರೆ. ಫತೆ ಅಹ್ಮದ್ ಡಂಬಲ್ ಹಾಗೂ ಮುಸ್ತಫ್ ಮಗ್ತುಮ್ ಶಿರಕೊಳ ಎಂಬ ಇಬ್ಬರ ಹೆಸರು ತಿಳಿದಿದ್ದು, ಉಳಿದವರನ್ನು ನೋಡಿದರೆ ಗುರುತಿಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇವರಿಬ್ಬರೊಂದಿಗೆ ಇನ್ನೂ 13 ಮಂದಿ ಹೆಸರು-ವಿಳಾಸ ತಿಳಿಯದವರ ವಿರುದ್ಧ ದೂರು ನೀಡಲಾಗಿದೆ.

ಧಾರವಾಡದ 17 ಮಂದಿ ಪ್ರವಾಸಕ್ಕೆ

ಇತ್ತ ಫತೆ ಅಹ್ಮದ್ (23) ನೀಡಿರುವ ಪ್ರತಿದೂರಿನ ಪ್ರಕಾರ, ಅವರು ಧಾರವಾಡದ ಓಲ್ಡ್ ಗ್ರಾಸ್ ಮಾರ್ಕೆಟ್‌ನ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮೊಂದಿಗೆ ಇನ್ನೂ 16 ಮಂದಿ ಕೆಲಸ ಮಾಡುತ್ತಾರೆ. ಗಾಂಧೀ ಜಯಂತಿಯಂದು ಚಿಕನ್ ಅಂಗಡಿಗೆ ರಜೆ ಇದ್ದ ಕಾರಣ 17 ಮಂದಿ ಸೇರಿಕೊಂಡು ಬೆಳಗ್ಗೆ 11 ಗಂಟೆಗೆ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಧಾರವಾಡದಿಂದ ನಾಗರಮಡಿ ಫಾಲ್ಸ್‌ಗೆ ಹೊರಟಿದ್ದರು.

ಮಧ್ಯಾಹ್ನ ಸುಮಾರು 3.30ಕ್ಕೆ ಫಾಲ್ಸ್‌ಗೆ ತಲುಪಿ ಎಲ್ಲರೂ ಅಲ್ಲಿಯೇ ಊಟ ಮಾಡಿಕೊಂಡಿದ್ದರು. ಮರಳಿ ಹೊರಡುವ ವೇಳೆ ಸ್ಥಳೀಯ ಊರಿನ ಇಬ್ಬರು ಬಂದು ಫಾಲ್ಸ್‌ನಲ್ಲಿ ಬಾಟಲಿ ಎಸೆಯಬಾರದು ಎಂದು ಹೇಳಿ ಬೈದಿದ್ದಲ್ಲದೆ, ತಮ್ಮ ಮೇಲೆ ಹಲ್ಲೆಗೆ ಮುಂದಾದರು ಎಂದು ಫತೆ ಆರೋಪಿಸಿದ್ದಾರೆ.

ನಂತರ ಎಲ್ಲರೂ ವಾಹನದ ಬಳಿ ಬಂದಾಗ ಆ ಇಬ್ಬರೂ ಹಿಂದಿನಿಂದ ಬಂದು, ಮತ್ತಿಬ್ಬರೊಂದಿಗೆ ಸೇರಿಕೊಂಡು ವಾಹನ ಅಡ್ಡಗಟ್ಟಿ ನಿಲ್ಲಿಸಿದರು. ಬೇರೆ ಊರಿನಿಂದ ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಕೆಟ್ಟ ಶಬ್ದಗಳಿಂದ ಬೈದು, ತಮ್ಮ ಹಾಗೂ ಮುಸ್ತಫಾ ಶಿರಕೊಳ ಅವರಿಗೆ ಕೈಯಿಂದ ಹೊಡೆದಿದ್ದಾರೆ ಎಂದು ಪ್ರತಿದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಆರೋಪಿಗಳ ಪೈಕಿ ಒಬ್ಬರು ಬೈಕ್ ಚಾವಿಯಿಂದ ಬೆನ್ನಿಗೆ ಹಾಗೂ ಕೈಗೆ ಕೆರೆದು ಗಾಯಗೊಳಿಸಿದ್ದಾರೆ ಎಂದು ಫತೆ ಆರೋಪಿಸಿದ್ದಾರೆ. ಈ ಘಟನೆ ಸಂಜೆ ಸುಮಾರು 5.30ಕ್ಕೆ ನಡೆದಿದ್ದು, ಇಂದೇಶ ಮಾರುತಿ ಕೊಳಂಬಕರ, ಪ್ರಸಾದ್ ಮಾರುತಿ ಕೊಳಂಬಕರ, ಅಜಯ್ ಪಡ್ತಿ ಹಾಗೂ ಹೆಸರು-ವಿಳಾಸ ತಿಳಿಯದ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರತಿದೂರು ನೀಡಿದ್ದಾರೆ.

ಗಾಂಧೀ ಜಯಂತಿಯ ರಜೆಯಲ್ಲಿ ಪ್ರವಾಸಕ್ಕೆ ಬಂದಿದ್ದ 17 ಮಂದಿಯ ತಂಡ ಹಾಗೂ ಸ್ಥಳೀಯರ ನಡುವಿನ ಸಣ್ಣ ವಿಚಾರದ ಜಗಳ ಠಾಣೆ ಮೆಟ್ಟಿಲೇರಿದ್ದು, ಎರಡೂ ಕಡೆಯ ಆರೋಪಗಳ ಕುರಿತು ಕಾರವಾರ ಗ್ರಾಮೀಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

 

 

 

Please Share: