ಕರಾವಳಿ ವಾಯ್ಸ್ ನ್ಯೂಸ್  

ಸಿದ್ದಾಪುರ: ಕೆಎಸ್ಆರ್ ಟಿಸಿ ಬಸ್‌ಗೆ ದಾರಿ ಬಿಡುವ ವಿಚಾರಕ್ಕೆ ಶುರುವಾದ ಜಗಳ, ಬಳಿಕ ಚಾಲಕ–ಕಂಡಕ್ಟರ್ ಮೇಲಿನ ಹಲ್ಲೆಗೆ ತಿರುಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

Banner Ad

ಬಂಧಿತರನ್ನು ಸಂದೀಪ ವಾಲ್ಮೀಕಿ, ಸೈಪ್ ಅಲಿ ಸೈಯದ್ ಹಾಗೂ ಹರ್ಷವರ್ಧನ ಕೃಷ್ಣ ನಾಯ್ಕ ಎಂದು ಗುರುತಿಸಲಾಗಿದೆ.

ಶಿರಸಿ ತಾಲೂಕಿನ ಕಾನಗೋಡದ ಕೆಎಸ್‌ಆರ್‌ಟಿಸಿ ಚಾಲಕ ಭಾಸ್ಕರ ಪಟಗಾರ (49) ಅವರು ಅ.1ರಂದು ರಾತ್ರಿ ಸಿದ್ದಾಪುರ ಠಾಣೆಗೆ ನೀಡಿದ ದೂರಿನ ಪ್ರಕಾರ, ಆರೋಪಿಗಳು ಓಮಿನಿ ವಾಹನದಲ್ಲಿ ತೆರಳುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡದೆ ಮುಂದೆ ಸಾಗಿದ್ದರು. ಬಳಿಕ ದಾರಿ ಬಿಟ್ಟ ವಿಚಾರವಾಗಿ ಚಾಲಕನೊಂದಿಗೆ ಜಗಳ ತೆಗೆದುಕೊಂಡು ಬಸ್‌ನ್ನು ಅಡ್ಡಗಟ್ಟಿ ತಡೆದಿದ್ದರು ಎನ್ನಲಾಗಿದೆ.

ನಂತರ ನಾಣಿಕಟ್ಟಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದ ವೇಳೆ ಆರೋಪಿಗಳು ಮತ್ತೆ ಬಂದು ಕಂಡಕ್ಟರ್ ಗಣೇಶ ಉಪೇಂದ್ರ ನಾಯ್ಕ (48) ಅವರನ್ನು ಬಸ್‌ನಿಂದ ಕೆಳಗೆ ಎಳೆದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಗಳ ಬಿಡಿಸಲು ಮುಂದಾದ ಚಾಲಕ ಭಾಸ್ಕರ ಪಟಗಾರ ಅವರ ಮೇಲೂ ಸಂದೀಪ ಕಬ್ಬಿಣದ ಜಾಕ್‌ನಿಂದ ಹೊಡೆಯಲು ಮುಂದಾಗಿದ್ದು, ತಪ್ಪಿಸಿಕೊಂಡ ಪರಿಣಾಮ ಜಾಕ್‌ ಬಲಗೈ ಬೆರಳಿಗೆ ಬಿದ್ದು ಗಾಯವಾಗಿದೆ. ಸೈಪ್ ಅಲಿ ಸೈಯದ್ ಚಾಲಕನ ಮುಖಕ್ಕೆ ಗುದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕಂಡಕ್ಟರ್‌ನ ಬಲಭುಜಕ್ಕೂ ಕಬ್ಬಿಣದ ಜಾಕ್‌ನಿಂದ ಹೊಡೆದಿದ್ದು, ಚಾಲಕ ಮತ್ತು ಕಂಡಕ್ಟರ್‌ಗೆ ಜೀವ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಎಸ್‌ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಜಿ. ಹಾಗೂ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪಿಐ ಜೆ.ಬಿ. ಸೀತಾರಾಮ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಪೊಲೀಸ್ ತಂಡ ಘಟನೆ ನಡೆದ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ನಾಗಪ್ಪ, ಶಾಂತಿನಾಥ ಕೆ. ಪಾಸಾನೆ ಸೇರಿದಂತೆ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

 

Please Share: