ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಗಾಂಧೀಜಿಯವರ ತತ್ವಗಳು ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗದೆ, ನಮ್ಮ ಬದುಕಿನ ಭಾಗವಾಗಬೇಕು. ಅವರ ಸರಳತೆ, ಸತ್ಯ, ಅಹಿಂಸೆ ಹಾಗೂ ಸ್ವಚ್ಛತೆಯ ಸಂದೇಶವನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.
ನಗರಸಭೆಯ ಮಹಾತ್ಮ ಗಾಂಧೀ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿಯವರು ತಮ್ಮ ಬ್ಯಾರಿಸ್ಟರ್ ವೃತ್ತಿ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ದೇಶಾದ್ಯಂತ ಸಂಚರಿಸಿ ಜನರನ್ನು ಒಗ್ಗೂಡಿಸಿದ್ದರು. ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳ ಮೇಲ್ನೋಟದ ಮಾಹಿತಿಗೆ ಸೀಮಿತವಾಗದೆ ಪುಸ್ತಕ ಓದಿ ಇತಿಹಾಸ ಹಾಗೂ ತತ್ವಗಳನ್ನು ಅರಿಯಬೇಕು ಎಂದರು.

ಜಿಪಂ ಸಿಇಒ ಡಾ. ದಿಲೀಷ್ ಶಶಿ ಮಾತನಾಡಿ, ಸಂವಿಧಾನ, ಕಾನೂನು ಹಾಗೂ ನಿಯಮಗಳಲ್ಲಿ ಗಾಂಧೀಜಿಯವರ ಮೌಲ್ಯಗಳು ಅಡಕವಾಗಿದ್ದು, ಸರ್ಕಾರಿ ಕರ್ತವ್ಯ ನಿರ್ವಹಿಸುವಾಗ ಸಂವಿಧಾನಾತ್ಮಕ ಮೌಲ್ಯಗಳನ್ನು ಪಾಲಿಸಬೇಕು. ಸ್ವಚ್ಛತೆ ಮನೆ, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಿಂದಲೇ ಆರಂಭವಾಗಬೇಕು. ಸ್ವಚ್ಛ ವಾತಾವರಣದಿಂದ ಕಾರ್ಯದಕ್ಷತೆ ಹೆಚ್ಚುತ್ತದೆ ಎಂದರು. ಲಾಲ್ ಬಹದ್ದೂರ್ ಶಾಸ್ತ್ರೀ ಅವರ ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯನ್ನು ಸ್ಮರಿಸಿದರು.
ಎಸ್ಪಿ ದೀಪನ್ ಎಂ.ಎನ್. ಮಾತನಾಡಿ, ‘ನನ್ನ ಬದುಕೇ ನನ್ನ ಸಂದೇಶ’ ಎಂಬ ಗಾಂಧೀಜಿಯವರ ಆಶಯದಂತೆ ಗುರಿಯಷ್ಟೇ ಅದನ್ನು ತಲುಪುವ ಮಾರ್ಗವೂ ಪ್ರಾಮಾಣಿಕ ಹಾಗೂ ಅಹಿಂಸಾತ್ಮಕವಾಗಿರಬೇಕು. ಸಮಾಜವನ್ನು ಒಟ್ಟಾಗಿ ಕರೆದೊಯ್ಯುವುದರಿಂದ ಮಾತ್ರ ಶಾಶ್ವತ ಪ್ರಗತಿ ಸಾಧ್ಯ ಎಂದರು.
ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ದೀಕ್ಷಾ ಮಂಜುನಾಥ ನಾಯ್ಕ, ಗಗನಾ ಮಂಗಳ ಗೊಂಡ, ರಾಕೇಶ ರವೀಂದ್ರ ಭಾಗ್ವತ್; ಪದವಿಪೂರ್ವ ವಿಭಾಗದಲ್ಲಿ ಸಿಂಚನಾ ಜಿ. ಭಟ್ಟ, ಅಮೃತಾ ಕೆ. ಶಾನಭಾಗ, ಮಾನ್ಯಾ ವಿನಾಯಕ ಬಾಂದೇಕರ; ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಚಂದನಾ ಪಾಂಡುರಂಗ ನಾಯ್ಕ, ಸಮಯಾ ಬೊಮ್ಮಯ್ಯ ನಾಯಕ ಹಾಗೂ ಬಸವರಾಜ ಯಲ್ಲಪ್ಪ ಕನಸಾವಿ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಪೌರಾಯುಕ್ತ ಜಗದೀಶ ಹುಲಿಗೆಜ್ಜಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಬಳಿಕ ನಗರಸಭೆ ಮುಂಭಾಗದ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ನಗರಸಭೆ ಲೆಕ್ಕಪತ್ರ ವಿಭಾಗಾಧಿಕಾರಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


