ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಪದವೀಧರರ ಹಕ್ಕುಗಳ ರಕ್ಷಣೆ, ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಸಂಕಲ್ಪದೊಂದಿಗೆ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಬೇಕು ಎಂದು ಕೆಪಿಸಿಸಿ ಪದವೀಧರರ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ. ಶರಣು ಮುಷ್ಟಿಗೇರಿ ಮನವಿ ಮಾಡಿದರು.

Banner Ad

ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರು ಹಾಗೂ ಅತಿಥಿ ಶಿಕ್ಷಕರು ಎದುರಿಸುತ್ತಿರುವ ವೇತನ ತಾರತಮ್ಯ, ನಿರುದ್ಯೋಗ ಮತ್ತು ಸೇವಾ ಭದ್ರತೆಯ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ನ್ಯಾಯ ಒದಗಿಸಲು ಅನುಭವವುಳ್ಳ ಪ್ರತಿನಿಧಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೋಹನ ಲಿಂಬಿಕಾಯಿ ಸೂಕ್ತ ಆಯ್ಕೆಯಾಗಿದ್ದಾರೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಮಗನಾದ ಲಿಂಬಿಕಾಯಿ ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್, ಕಾನೂನು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಹಾಗೂ ರಾಜ್ಯ ವಕೀಲರ ಪರಿಷತ್ತಿನಲ್ಲಿ ಸೇವೆ ಸಲ್ಲಿಸಿದ್ದಾರೆ. ವಕೀಲರ ಪರಿಷತ್ತಿನ ಉಪಾಧ್ಯಕ್ಷ, ಕಾನೂನು ಮಹಾವಿದ್ಯಾಲಯದ ಒಂದೂವರೆ ದಶಕದ ಗೌರವ ಪ್ರಾಧ್ಯಾಪಕ, ಮಾಜಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಅನುಭವ ಹೊಂದಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆಗಳ ಭರ್ತಿ, ಶಿಕ್ಷಕರ ಮೇಲಿನ ಅನಗತ್ಯ ಕೆಲಸದ ಹೊರೆ ಕಡಿತ, ಶಿಕ್ಷಣ ಸಂಸ್ಥೆಗಳಿಗೆ ನಿರ್ವಹಣಾ ಅನುದಾನ ಮತ್ತು ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ಅವರ ಪ್ರಮುಖ ಆದ್ಯತೆಗಳಾಗಿವೆ. ಅನುದಾನರಹಿತ ಸಂಸ್ಥೆಗಳಿಗೆ ಅನುದಾನ, ಅಲ್ಲಿನ ಶಿಕ್ಷಕರಿಗೆ ನ್ಯಾಯಯುತ ಕನಿಷ್ಠ ವೇತನ, ನಿರುದ್ಯೋಗಿಗಳಿಗೆ ಉದ್ಯೋಗ, ಕೌಶಲ್ಯ ತರಬೇತಿ ಹಾಗೂ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದಕ್ಕೂ ಒತ್ತು ನೀಡಲಿದ್ದಾರೆ.

ಸರ್ಕಾರಿ ಹಾಗೂ ಅರೆಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಮರುಜಾರಿ ಮತ್ತು ನಾಲ್ಕು ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆ, ಉದ್ಯಮಗಳನ್ನು ಉತ್ತೇಜಿಸಿ ಯುವ ಪದವೀಧರರಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನೂ ಹೊಂದಿದ್ದಾರೆ. ಪದವೀಧರರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕತ್ವಕ್ಕಾಗಿ ಅ. 23ರಂದು ನಡೆಯುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮೋಹನ ಲಿಂಬಿಕಾಯಿ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಶರಣು ಮುಷ್ಟಿಗೇರಿ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಅಶೋಕ ಬಿ.ಎಚ್., ಡಾ. ಅಶೋಕ ಹಳ್ಳಿಯವರ, ಡಾ. ರಾಮಕೃಷ್ಣ ಹಾಗೂ ನಾಗಾರ್ಜುನ ಉಪಸ್ಥಿತರಿದ್ದರು.

ವಿಡಿಯೋಗಾಗಿ ಒಂದು ಕ್ಲಿಕ್ ಮಾಡಿ..!

 

Please Share: