ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ಗುತ್ತಿಗೆ ಕಾಮಗಾರಿಯ ಬಿಲ್ ಪಾವತಿಸಲು ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಇಲ್ಲಿನ ಜಿಲ್ಲಾ ಪಂಚಾಯಿತಿ ವಿಭಾಗೀಯ ಕಚೇರಿಯ ಲೆಕ್ಕಪರಿಶೋಧಕ ಮಲ್ಲಿಕಾರ್ಜುನ ಪಾಟೀಲ್ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಲೆಕ್ಕಪರಿಶೋಧಕ ಮಲ್ಲಿಕಾರ್ಜುನ ಪಾಟೀಲ್
ಮುಂಡಗೋಡಿನ ಗುತ್ತಿಗೆದಾರ ನಾಗರಾಜ ಕಟ್ಟಿಮನೆ ಅವರ ಬಳಿ ಬಿಲ್ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಡಿವೈಎಸ್ಪಿ ಧನ್ಯ ನಾಯಕ ನೇತೃತ್ವದ ತಂಡ ಜಿಪಂ ಕಚೇರಿಯಲ್ಲಿ ಕಾರ್ಯಾಚರಣೆ ನಡೆಸಿ, ಲಂಚದ ಹಣದ ಸಮೇತ ಅಧಿಕಾರಿಯನ್ನು ಹಿಡಿದಿದೆ.
ಶಿರಸಿ ಜಿಪಂ ವಿಭಾಗೀಯ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಒಂದು ವರ್ಷದ ಹಿಂದೆ ಇದೇ ಕಚೇರಿಯಲ್ಲಿ ಸುರೇಶ ಬಿಳಗಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದೀಗ ಮತ್ತೊಂದು ದಾಳಿ ನಡೆದಿದ್ದು, ಈ ಕಚೇರಿಯಲ್ಲಿ ಒಟ್ಟು ಮೂರನೇ ಬಾರಿ ಲೋಕಾಯುಕ್ತ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.
ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳು ಅಮಾನತು ಅವಧಿ ಮುಗಿದ ಬಳಿಕ ಮತ್ತೆ ಲಂಚದ ವ್ಯವಹಾರದಲ್ಲಿ ತೊಡಗುತ್ತಾರೆ ಎಂಬ ಆರೋಪವನ್ನು ಗುತ್ತಿಗೆದಾರರು ಮಾಡಿದ್ದಾರೆ. ಲಂಚದ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಯಾಗದಿರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಮಲ್ಲಿಕಾರ್ಜುನ ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಗುತ್ತಿಗೆದಾರರು, ಲೋಕಾಯುಕ್ತರ ಕ್ರಮದಿಂದ ತಕ್ಕ ಶಾಸ್ತಿಯಾದಂತಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗಷ್ಟೇ ಗುತ್ತಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಜಿಪಂ ಕಚೇರಿ ಜಪ್ತಿಗೆ ಆದೇಶವಾಗಿತ್ತು. ಇದರ ಬೆನ್ನಲ್ಲೇ ಲಂಚದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆದಿರುವುದು ಕಚೇರಿಯ ಕಾರ್ಯವೈಖರಿ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪದೇಪದೆ ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಕಡಿವಾಣ ಹಾಕಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.


