ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 75 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ₹1.70 ಲಕ್ಷ ನಗದು ದೋಚಿಕೊಂಡು ಹೋದ ಘಟನೆ ನಡೆದಿದೆ.
ಆಲಳ್ಳಿ ಗ್ರಾಮದ ಕಮಲವ್ವ ತಿರುಕಪ್ಪ ಆಡೂರ (75) ಕೊಲೆಯಾದ ವೃದ್ಧೆ. ಅವರಿಗೆ ಐವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮನೆಯ ಸಮೀಪದಲ್ಲೇ ಮಗನ ಮನೆ ಇದ್ದರೂ, ಘಟನೆ ನಡೆದ ದಿನ ಮಗ ಹಾಗೂ ಸೊಸೆ ಊರಿಗೆ ತೆರಳಿದ್ದರು ಎನ್ನಲಾಗಿದೆ. ವೃದ್ಧೆ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ದುಷ್ಕರ್ಮಿಗಳು ನುಗ್ಗಿ ಹತ್ಯೆ ಮಾಡಿ ದರೋಡೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಮನೆಯಲ್ಲಿದ್ದ ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ ₹1.70 ಲಕ್ಷ ನಗದು ಹಣವನ್ನು ದೋಚಿಕೊಂಡು ಹೋಗಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಮುಂಡಗೋಡ ವೃತ್ತ ನಿರೀಕ್ಷಕ ರಮೇಶ ಹಾನಾಪುರ ಹಾಗೂ ಪಿಎಸ್ಐ ಮಂಜುನಾಥ ಗೌಡರ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಕಾರವಾರದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಶ್ವಾನವು ಮನೆಯ ಸುತ್ತಮುತ್ತ ಹಾಗೂ ಹಿಂಭಾಗದ ಓಣಿಯಲ್ಲಿ ಸುತ್ತಾಡಿ ಮರಳಿದೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.


