ವರದಿ: ಸೋಮಶೇಖರ್ ಲಮಾಣಿ ಹಾವೇರಿ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರ ಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಮೆರವಣಿಗೆಯು ಸೌಹಾರ್ದತೆಗೆ ಸಾಕ್ಷಿಯಾಯಿತು. ಮೆರವಣಿಗೆಯು ಮಸೀದಿಯ ಮುಂಭಾಗ ಸಾಗುತ್ತಿದ್ದ ವೇಳೆ ನಮಾಜ್ ಸಮಯವಾದ ಕಾರಣ, ಅಜಾನ್ ಮುಗಿಯುವವರೆಗೆ ಆರ್ಕೆಸ್ಟ್ರಾ ಹಾಗೂ ಧ್ವನಿವರ್ಧಕವನ್ನು ಸ್ಥಗಿತಗೊಳಿಸಿ ಗ್ರಾಮಸ್ಥರು ಭಾವೈಕ್ಯತೆ ಮೆರೆದರು.
ಭಾನುವಾರ ಗ್ರಾಮದಲ್ಲಿ ಜಾತಿ-ಮತ ಭೇದವಿಲ್ಲದೆ ವಾಲ್ಮೀಕಿ ಸಮುದಾಯ ಹಾಗೂ ಗ್ರಾಮದ ಹಿರಿಯ ನಾಗರಿಕರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿಯು ಗ್ರಾಮದ ಒಗ್ಗಟ್ಟನ್ನು ಎತ್ತಿಹಿಡಿಯಿತು.
ಹಲವು ಸಮುದಾಯಗಳು ವಾಸಿಸುವ ಕುನ್ನೂರ ಗ್ರಾಮವು ಯಾವುದೇ ಭೇದಭಾವಗಳಿಗೆ ಅವಕಾಶ ನೀಡದೆ, ‘ಎಲ್ಲರೂ ಒಂದೇ’ ಎಂಬ ಭಾವನೆಯಿಂದ ಸೌಹಾರ್ದತೆಯ ತಾಣವಾಗಿ ಗುರುತಿಸಿಕೊಂಡಿದೆ.
ಹಬ್ಬ-ಹರಿದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸಂಭ್ರಮಿಸುವ ಸಂಪ್ರದಾಯವನ್ನು ಇಲ್ಲಿನ ಹಿರಿಯರು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಬಾರಿಯ ವಾಲ್ಮೀಕಿ ಜಯಂತಿಯೂ ಗ್ರಾಮದ ಘನತೆ ಮತ್ತು ಸಾಮರಸ್ಯವನ್ನು ಮತ್ತಷ್ಟು ಹೆಚ್ಚಿಸಿದೆ.


