ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ರಾಜ್ಯದಲ್ಲಿ ಬರ, ದೇಶದಲ್ಲಿ ನಿರುದ್ಯೋಗ, ವಿಶ್ವದಲ್ಲಿ ಆರ್ಥಿಕ ಹಿಂಜರಿತ… ಇವೆಲ್ಲವನ್ನೂ ಮೀರಿಸುವ ಮಹಾ ದುರಂತವೊಂದು ಶಿರಸಿ ತಾಲೂಕಿನಲ್ಲಿ ನಡೆದುಹೋಗಿದೆ. ಹೌದು, ಬಚಗಾಂವದ ಹಿತ್ಲಗದ್ದೆಯಲ್ಲಿ ಬರೋಬ್ಬರಿ 40-50 ಮಲ್ಲಿಕಾ ಮಾವಿನಕಾಯಿಗಳು “ನಾಪತ್ತೆ” ಆಗಿವೆ!
ಘಟನೆಯ ವಿವರ ಇನ್ನೂ ರೋಚಕ. ನವೀದ್ ಅಹ್ಮದ್ ಅಬ್ದುಲ್ ಜಬ್ಬಾರ್ ಶೇಖ್ ಅವರ ಅಡಿಕೆ ತೋಟದ ಅಂಚಿನಲ್ಲಿ ವಂಶಪಾರಂಪರ್ಯವಾಗಿ ಬೆಳೆಯುತ್ತಿದ್ದ ಮಲ್ಲಿಕಾ ಮಾವಿನ ಮರಗಳ ಮೇಲೆ, ಭದ್ರಾಪುರದ ನೂರ್ ಅಹಮ್ಮದ್ ಮಹಮ್ಮದ್ ಗೌಸ್ (30) ಎಂಬವರು “ಆರೋಪದ ಪ್ರಕಾರ” ದಾಳಿ ಮಾಡಿದ್ದಾರೆ. ತೋಟದಲ್ಲಿ ಯಾರೂ ಇಲ್ಲದ “ಸುವರ್ಣ ಅವಕಾಶ” ಬಳಸಿಕೊಂಡು, ಸುಮಾರು 2,500 ರೂ. ಮೌಲ್ಯದ ಕಾಯಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ದೂರಲಾಗಿದೆ.
ಈ “ಅಂತಾರಾಷ್ಟ್ರೀಯ ಮಟ್ಟದ” ಕಳ್ಳತನದಿಂದ ತೀವ್ರ ಆಘಾತಕ್ಕೊಳಗಾದ ಮಾಲೀಕರು ತಕ್ಷಣ ಶಿರಸಿ ಗ್ರಾಮೀಣ ಠಾಣೆಗೆ ದೌಡಾಯಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪಿ.ಎಸ್.ಐ ಸಂತೋಷಕುಮಾರ ಎಂ ಅವರು ಕೂಡಲೇ ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಚಾಲನೆ ನೀಡಿದ್ದಾರೆ.
ಈಗ ಎಲ್ಲರ ಬಾಯಲ್ಲಿ ಒಂದೇ ಪ್ರಶ್ನೆ – ಕಳುವಾದ ಕಾಯಿಗಳು ಉಪ್ಪಿನಕಾಯಿ ಡಬ್ಬ ಸೇರಿದವೋ ಅಥವಾ ರಸ ತೆಗೆಯಲು ಹೋದವೋ?
ಸ್ಥಳೀಯರೊಬ್ಬರು ವ್ಯಂಗ್ಯವಾಗಿ ಹೇಳುವುದು ಹೀಗೆ: “ಮಲ್ಲಿಕಾ ಮಾವು ಅಂದ್ರೆ ಸಾಮಾನ್ಯನಾ ಸಾರ್? ಒಂದು ಕಾಯಿ ತಿಂದ್ರೆ ಮತ್ತೊಂದು ಬೇಕು ಅನ್ನಿಸುತ್ತೆ. ಹಾಗಾಗಿ ನೂರ್ ಅಹಮ್ಮದ್ ಅವರಿಗೆ ಕಾನೂನು ಅರ್ಥವಾಗಿರಲಿಕ್ಕಿಲ್ಲ. ಅವರದ್ದು ಕೇವಲ ‘ರುಚಿ ಸಂಶೋಧನೆ’ ಇರಬಹುದು!”
ಒಟ್ಟಿನಲ್ಲಿ ಕೃಷಿ ಬಿಕ್ಕಟ್ಟು, ಮಾರುಕಟ್ಟೆ ಕುಸಿತ, ವನ್ಯಜೀವಿ ಹಾವಳಿ ಇವೆಲ್ಲವನ್ನೂ ಪಕ್ಕಕ್ಕಿಟ್ಟು, ಶಿರಸಿ ಪೊಲೀಸರು ಈಗ “ಮಲ್ಲಿಕಾ ರಕ್ಷಣಾ ಪಡೆ”ಯಾಗಿ ಕೆಲಸ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಪ್ರತಿ ಮಾವಿನ ಮರಕ್ಕೂ ಸಿಸಿಟಿವಿ, ಪ್ರತಿ ಕಾಯಿಗೂ ಜಿಪಿಎಸ್ ಟ್ಯಾಗ್ ಬಂದರೂ ಆಶ್ಚರ್ಯವಿಲ್ಲ.
ಏಕೆಂದರೆ ಇಲ್ಲಿ ಪ್ರಶ್ನೆ ಕೇವಲ ಮಾವಿನಕಾಯಿಯದ್ದಲ್ಲ, ರೈತನ ಸ್ವಾಭಿಮಾನದ್ದು. ಮತ್ತು 2,500 ರೂ.ಗಳ ಘನತೆಯದ್ದು!
