ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ನಗರದ ಹುಬ್ಬಳ್ಳಿ ರಸ್ತೆ ಅಯ್ಯಪ್ಪನಗರ ಸಮೀಪದ ಸಲಾಮತ್ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 10 ಕ್ವಿಂಟಲ್ 63 ಕೆ.ಜಿ. ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

Banner Ad

ಜಾಕೀರ್ ಅಯೂಬ್ ಖಾನ್ ಪಠಾಣ ಎಂಬಾತ ತನ್ನ ಮನೆಯ ಹೊರಭಾಗದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 10 ಕ್ವಿಂಟಲ್ 63 ಕೆ.ಜಿ. ಅಕ್ಕಿ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪಡಿತರ ವ್ಯವಸ್ಥೆಯಡಿ ಸಾರ್ವಜನಿಕರಿಗೆ ವಿತರಿಸಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡುವುದು ಹಾಗೂ ಸಾಗಾಟ ಮಾಡುವುದು ನಿಯಮಬಾಹಿರವಾಗಿದ್ದು, ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆಯ ಶಿರಸ್ತೇದಾರ ವೀಣಾ, ಆಹಾರ ನಿರೀಕ್ಷಕಿ ಕವಿತಾ ಪಾಠಣಕರ, ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಗೀತಾ ಕಲಗಟಗಿ, ಕಂದಾಯ ಇಲಾಖೆಯ ಪಲ್ಲವಿ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

ಅಕ್ರಮ ಪಡಿತರ ದಾಸ್ತಾನು ಹಾಗೂ ಕಾಳಸಂತೆಯಲ್ಲಿ ಮಾರಾಟದ ವಿರುದ್ಧ ಆಹಾರ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.

 

 

 

 

Please Share: