ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕೈಗಾ ಅಣುಸ್ಥಾವರದ ಬಳಕೆಯೊಂದಿಗೆ ವಿಕಿರಣಶೀಲ ಅಂಶಗಳಿರುವ ಸಾಧ್ಯತೆ ಇರುವ ಕದ್ರಾ ಜಲಾಶಯದ ನೀರನ್ನು ಶುದ್ಧೀಕರಿಸಿ ಕಾರವಾರ ಹಾಗೂ ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರಾಗಿ ಪೂರೈಸುವ ಯೋಜನೆಯನ್ನು ಕೈಬಿಟ್ಟು, ಕೊಡಸಳ್ಳಿ ಜಲಾಶಯದಿಂದ ನೀರು ಪೂರೈಸುವಂತೆ ಹಿರಿಯ ನ್ಯಾಯವಾದಿ ಕೆ.ಆರ್. ದೇಸಾಯಿ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಾ ನೀರನ್ನು ಕೈಗಾ ಅಣುಸ್ಥಾವರದ ಶೀತಲೀಕರಣಕ್ಕೆ ಬಳಸಿದ ಬಳಿಕ ಅದೇ ಜಲಾಶಯಕ್ಕೆ ಬಿಡಲಾಗುತ್ತದೆ. ಈ ನೀರನ್ನು ಜಲಜೀವನ್ ಮಿಷನ್ ಮೂಲಕ ಕುಡಿಯಲು ಪೂರೈಸುವ ಮುನ್ನ ವಿಕಿರಣಶೀಲ ಅಂಶಗಳ ಕುರಿತು ಸಮಗ್ರ ವೈಜ್ಞಾನಿಕ ಪರಿಶೀಲನೆ ನಡೆಸಿ, ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಕೇವಲ ರಿಸೈಕಲ್ ಹಾಗೂ ಫಿಲ್ಟರ್ ಮಾಡುವುದರಿಂದ ವಿಕಿರಣವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇಂತಹ ನೀರಿನ ಸೇವನೆಯಿಂದ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಷರತ್ತುಗಳಂತೆ ಕದ್ರಾ ಜಲಾಶಯಕ್ಕೆ ಹೊರಬಿಡುವ ನೀರಿನ ಉಷ್ಣತೆಯ ವ್ಯತ್ಯಾಸ 5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಬಾರದು. ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆಗೆ ಎನ್‌ಜಿಓ, ಸಾರ್ವಜನಿಕರು, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಹಾಗೂ ವಿಕಿರಣ ನಿಯಂತ್ರಣ ಮಂಡಳಿ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಬೇಕೆಂಬ ನಿರ್ದೇಶನವಿದ್ದರೂ, ಇದುವರೆಗೆ ಸಮಿತಿ ರಚನೆ ಹಾಗೂ ಮಾನಿಟರಿಂಗ್ ವರದಿಗಳನ್ನು ಸಾರ್ವಜನಿಕಗೊಳಿಸಿಲ್ಲ ಎಂದು ಆರೋಪಿಸಿದರು.
ಅಶೋಕ ರಾಣೆ ಮಾತನಾಡಿ, ಕೊಡಸಳ್ಳಿ ಜಲಾಶಯದಿಂದ ನೀರು ಪೂರೈಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಸಲ್ಲಿಸಲಾಗಿದೆ. ಅಗತ್ಯ ಜಾಗ ನೀಡಲು ಸ್ಥಳೀಯರು ಸಿದ್ಧರಿದ್ದು, ಬೇಕಾದರೆ ಬಾವಿ ನಿರ್ಮಿಸಿ ನೀರು ಪೂರೈಸುವಂತೆಯೂ ಮನವಿ ಮಾಡಲಾಗಿದೆ. ಜುಲೈ 2ರಂದು ನಡೆದ ಚಿತ್ತಾಕುಲ ಗ್ರಾಮ ಪಂಚಾಯಿತಿ ಸಭೆಯಲ್ಲಿ ಕೊಡಸಳ್ಳಿ ಜಲಾಶಯದಿಂದ ನೀರು ಪೂರೈಸುವಂತೆ ಒಮ್ಮತದ ನಿರ್ಣಯ ಕೈಗೊಂಡು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದರು.

ಕೈಗಾ ಯೋಜನೆ ಜಾರಿಯಾಗುವ ಸಂದರ್ಭದಲ್ಲಿ ಅಣುಶಕ್ತಿ ಆಯೋಗದ ಅಂದಿನ ಅಧ್ಯಕ್ಷ ರಾಜಾರಾಮ ಅವರು ಕಾರವಾರದ ಅಭಿವೃದ್ಧಿಗೆ ರೂ.200 ಕೋಟಿ ನೀಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಇದೀಗ ಜನರ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಕದ್ರಾ ನೀರು ಪೂರೈಕೆ ನಿಲ್ಲಿಸದಿದ್ದರೆ ಹೋರಾಟ ಕೈಗೊಳ್ಳುವುದಾಗಿ ದೇಸಾಯಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸನಾತನ ಸ್ವರಾಜ್ ಸಂಘದ ಅಧ್ಯಕ್ಷ ವಿನಾಯಕ ಸಾವಂತ, ಗುರು ಸಾವಂತ, ಕೋಮಲ ನಾಗೇಕರ್ ಉಪಸ್ಥಿತರಿದ್ದರು.
