ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮೂಲವ್ಯಾಧಿ ಹಾಗೂ ಗುದಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಿಹಿಸುದ್ದಿ. ವಿಶ್ವ ಪೈಲ್ಸ್ ದಿನದ ಅಂಗವಾಗಿ ಕಾರವಾರದ ಮೆಡ್ ಸ್ಕ್ವೇರ್ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರವು ನ.20ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಿದೆ. ಶಿಬಿರದಲ್ಲಿ ತಪಾಸಣೆ, ವೈದ್ಯಕೀಯ ಸಮಾಲೋಚನೆ, ಚಿಕಿತ್ಸೆ ಹಾಗೂ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಸಂಸ್ಥಾಪಕಿ ಡಾ. ಲಲಿತಾ ಶೆಟ್ಟಿ, ಮೂಲವ್ಯಾಧಿ ಸೇರಿದಂತೆ ಗುದಸಂಬಂಧಿ ಕಾಯಿಲೆಗಳು ಅನೇಕ ಜನರನ್ನು ಕಾಡುತ್ತಿವೆ. ಆದರೆ ಮುಜುಗರ ಮತ್ತು ನಿರ್ಲಕ್ಷ್ಯದಿಂದಾಗಿ ಹಲವರು ಆರಂಭಿಕ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸುತ್ತಿಲ್ಲ. ಇದರಿಂದ ಕಾಯಿಲೆ ಉಲ್ಬಣಿಸುವ ಸಾಧ್ಯತೆಯಿದ್ದು, ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ ಎಂದರು.
ಸಾರ್ವಜನಿಕರಲ್ಲಿ ಈ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದರ ಜತೆಗೆ, ಅಗತ್ಯವಿರುವವರಿಗೆ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಕಾರವಾರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಯಾವುದೇ ಮುಜುಗರವಿಲ್ಲದೆ ಶಿಬಿರದಲ್ಲಿ ಭಾಗವಹಿಸಿ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಶಿಬಿರದ ವಿವರ:
ದಿನಾಂಕ: ನವೆಂಬರ್ 20, ಶುಕ್ರವಾರ
ಸಮಯ: ಬೆಳಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ
ಸ್ಥಳ: ಮೆಡ್ ಸ್ಕ್ವೇರ್ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರ, ಮುರಳೀಧರ ರಸ್ತೆ, ಶ್ರೀ ಬ್ರಹ್ಮದೇವ ದೇವಸ್ಥಾನದ ಎದುರು, ಕಾರವಾರ.
ಸೇವೆಗಳು: ಉಚಿತ ತಪಾಸಣೆ, ವೈದ್ಯಕೀಯ ಸಮಾಲೋಚನೆ, ಚಿಕಿತ್ಸೆ ಹಾಗೂ ಔಷಧ ವಿತರಣೆ.
ಸುದ್ದಿಗೋಷ್ಠಿಯಲ್ಲಿ ಡಾ. ಸಿದ್ದಾಂತ ಮಡ್ಕೇಕರ್ ಹಾಗೂ ಡಾ. ಸುರೇಶ್ ಭಜಂತ್ರಿ ಉಪಸ್ಥಿತರಿದ್ದರು.
“ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಮುಜುಗರವೂ ಬೇಡ. ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಿ!”


