ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಆಕಸ್ಮಿಕ ಅಗ್ನಿ ಅವಘಡದಿಂದ ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ನೆರವಿನ ಹಸ್ತ ಚಾಚುವ ಮೂಲಕ ಸಾಮಾಜಿಕ ಹೋರಾಟಗಾರ ಮಾಸ್ತಪ್ಪ ನಾಯ್ಕ ಬಲಸೆ ಮಾನವೀಯತೆ ಮೆರೆದಿದ್ದಾರೆ.

ಬೈಲೂರು ಗ್ರಾಮದ ಮೂರುಕಟ್ಟೆ ನಿವಾಸಿ ಈಶ್ವರ ನಾಯ್ಕ ಸಸಿಹಿತ್ತಲ ಅವರ ಮನೆಯಲ್ಲಿ ನ.2ರಂದು ಸಂಜೆ ಸುಮಾರು 4 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಘಟನೆಯಿಂದ ಕುಟುಂಬದವರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಅಗ್ನಿ ಅವಘಡದ ವಿಷಯ ತಿಳಿಯುತ್ತಿದ್ದಂತೆ ತಡಮಾಡದೆ ಸ್ಥಳಕ್ಕೆ ಧಾವಿಸಿದ ಮಾಸ್ತಪ್ಪ ನಾಯ್ಕ ಬಲಸೆ ಅವರು ಹಾನಿಗೊಳಗಾದ ಮನೆ ಹಾಗೂ ಕುಟುಂಬದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಸಂಕಷ್ಟದಲ್ಲಿದ್ದ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದ ಅವರು, ತಕ್ಷಣವೇ ಸಹಾಯಧನ ನೀಡಿ ನೆರವಿಗೆ ನಿಂತರು.
ಕೇವಲ ಸಾಂತ್ವನದ ಮಾತುಗಳಿಗೆ ಸೀಮಿತವಾಗದೆ ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮಾಸ್ತಪ್ಪ ನಾಯ್ಕ ಬಲಸೆ ಅವರು ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅವರ ಈ ಸ್ಪಂದನೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಬಲಸೆ, ನಾಗರಾಜ್ ನಾಯ್ಕ, ಚೇತನ್ ನಾಯ್ಕ, ಕೃಷ್ಣ ನಾಯ್ಕ ಹಾಗೂ ಭಾಸ್ಕರ ದೇವಾಡಿಗ ಉಪಸ್ಥಿತರಿದ್ದರು.


