ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಚೇಷ್ಟೆ ಮಾಡಿದ್ದ ಬಾಲಕನಿಗೆ ಬುದ್ಧಿವಾದ ಹೇಳಲು ಆತನ ಮನೆಗೆ ತೆರಳಿದ್ದವರ ಮೇಲೆಯೇ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಅಸ್ನೋಟಿಯ ಭಗವತವಾಡದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಯನ್ನು ಚಿತ್ತಾಕುಲ ಪೊಲೀಸರು ಬಂಧಿಸಿದ್ದಾರೆ.

Banner Ad

ಬಂಧಿತನನ್ನು ದೀಪಕ ನಾಯ್ಕ (41) ಎಂದು ಗುರುತಿಸಲಾಗಿದೆ.

ಸೆ.26ರಂದು ಸಂಜೆ 5.45ರ ಸುಮಾರಿಗೆ ಅಂಗಡಿ ಗ್ರಾಮದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಬಾಲಕನೊಬ್ಬ ಚೇಷ್ಟೆ ಮಾಡಿದ್ದ. ಅಲ್ಲದೆ, ಸಿದ್ದಾರ್ಥ ಸತೀಶ ಗೋಸಾವಿ ಅವರ ಸ್ನೇಹಿತ ಸಾಯಿಸನಾಥ್ ಎಂಬಾತನೊಂದಿಗೆ ಬಾಲಕ ಜಗಳ ಮಾಡಿಕೊಂಡಿದ್ದ. ಈ ವಿಚಾರವನ್ನು ಬಾಲಕನ ಪೋಷಕರಿಗೆ ತಿಳಿಸಿ ಬುದ್ಧಿವಾದ ಹೇಳುವ ಉದ್ದೇಶದಿಂದ ರೋಷನ್ ದೀಪಕ ನಾಯ್ಕ, ಸಿದ್ದಾರ್ಥ ಸತೀಶ ಗೋಸಾವಿ ಹಾಗೂ ಇತರರು ಅಸ್ನೋಟಿಯ ಭಗವತವಾಡದಲ್ಲಿರುವ ಬಾಲಕನ ಮನೆಗೆ ತೆರಳಿದ್ದರು.

ಈ ವೇಳೆ ಬಾಲಕನ ತಂದೆ ದೀಪಕ ನಾಯ್ಕ ಹಾಗೂ ಬಾಲಕ ಸೇರಿ ರೋಷನ್ ದೀಪಕ ನಾಯ್ಕ ಮತ್ತು ಸಿದ್ದಾರ್ಥ ಸತೀಶ ಗೋಸಾವಿ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಸ್ಥಳೀಯ ಮಾಹಿತಿಯ ಆಧಾರದಲ್ಲಿ ದೀಪಕ ಬಾಳಾ ನಾಯ್ಕನನ್ನು ಸೆ.27ರಂದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನೂ ಕಾನೂನು ಪ್ರಕಾರ ಬಾಲ ನ್ಯಾಯ ಮಂಡಳಿ (ಜೆ.ಜೆ. ಬೋರ್ಡ್) ಮುಂದೆ ಹಾಜರುಪಡಿಸಲಾಗಿದೆ.

 

 

 

 

 

Please Share: