ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಸಂಚಾರಿ ಪೊಲೀಸ್ ಠಾಣೆ ಎದುರು ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಹಬ್ಬುವಾಡ ಕಡೆಯಿಂದ ಕಾರವಾರ ನಗರದತ್ತ ಇಬ್ಬರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಸಂಚಾರಿ ಪೊಲೀಸ್ ಠಾಣೆ ಎದುರು ಕೇರಳ ನೋಂದಣಿಯ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ರಸ್ತೆಗೆ ಬಿದ್ದ ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದು, ಅವರಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರೂ ಇದ್ದರು.
ಅಪಘಾತವನ್ನು ಗಮನಿಸಿದ ಸಮಾಜ ಸೇವಕ ಸೂರಜ್ ಕುರುಮಕರ್ ಅವರು ಗಾಯಾಳುಗಳಿಗೆ ತಕ್ಷಣ ನೆರವು ನೀಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು.
ಅಪಘಾತದ ಮಾಹಿತಿ ಪಡೆದ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


