ಕರಾವಳಿ ವಾಯ್ಸ್ ನ್ಯೂಸ್ 

ನವದೆಹಲಿ: ದೇಶಾದ್ಯಂತ ₹20 ಸಾವಿರ ಕೋಟಿ ಮೌಲ್ಯದ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಯಾಗದೆ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಬಾಕಿ ಇ-ಚಲನ್‌ಗಳನ್ನು ವಿದ್ಯುತ್‌ ಬಿಲ್‌ಗೆ ಲಿಂಕ್‌ ಮಾಡಿ ವಸೂಲಿ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

Banner Ad

ಸಂಚಾರ ನಿಯಮಗಳ ಜಾರಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಕೆ.ವಿ. ವಿಶ್ವನಾಥನ್‌ ಅವರ ಪೀಠ, ಜನರು ಟ್ರಾಫಿಕ್‌ ಚಲನ್‌ ದಂಡ ಪಾವತಿಸಲು ನಿರಾಸಕ್ತಿ ತೋರುತ್ತಿರುವುದನ್ನು ಗಮನಿಸಿದೆ. ಬಾಕಿ ದಂಡವನ್ನು ವಿದ್ಯುತ್‌ ಬಿಲ್‌ಗೆ ಸೇರಿಸಿದರೆ, ವಿದ್ಯುತ್‌ ಸಂಪರ್ಕ ಕಡಿತದ ಭಯದಿಂದ ಜನರು ಬಿಲ್‌ ಪಾವತಿಸುವ ವೇಳೆ ದಂಡವನ್ನೂ ಪಾವತಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ದೇಶಾದ್ಯಂತ ಒಟ್ಟು ₹45 ಸಾವಿರ ಕೋಟಿ ಮೌಲ್ಯದ ಇ-ಚಲನ್‌ಗಳಲ್ಲಿ ಈವರೆಗೆ ಸುಮಾರು ₹25 ಸಾವಿರ ಕೋಟಿ ವಸೂಲಿಯಾಗಿದ್ದು, ಇನ್ನೂ ₹20 ಸಾವಿರ ಕೋಟಿ ಬಾಕಿ ಉಳಿದಿದೆ. ದಂಡ ವಸೂಲಿಗೆ ಇಂತಹ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕರ್ನಾಟಕ 10ನೇ ಸ್ಥಾನ: ದೇಶದ ಒಟ್ಟು ಸಂಚಾರ ನಿಯಮ ಉಲ್ಲಂಘನೆ ಚಲನ್‌ಗಳ ಪೈಕಿ ಶೇ.80ರಷ್ಟು ಚಲನ್‌ಗಳು ಕೇವಲ 12 ರಾಜ್ಯಗಳಿಂದ ದಾಖಲಾಗಿವೆ ಎಂದು ಸಿಎಆರ್‌ಎಸ್24 ವರದಿ ತಿಳಿಸಿದೆ. ಉತ್ತರ ಪ್ರದೇಶ ಶೇ.21.04ರಷ್ಟು ಪಾಲಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಶೇ.11.51 ಹಾಗೂ ತಮಿಳುನಾಡು ಶೇ.10.90ರಷ್ಟು ಪಾಲು ಹೊಂದಿವೆ. ಕರ್ನಾಟಕ ಶೇ.2.47ರಷ್ಟು ಚಲನ್‌ಗಳೊಂದಿಗೆ 10ನೇ ಸ್ಥಾನದಲ್ಲಿದೆ.

 

 

Please Share: