ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ: ಮನೆಯ ಮುಂದೆ ಮೀನು ಹಾಗೂ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಮಹಿಳೆಯರೊಂದಿಗೆ ಮಾತಿನ ಚಕಮಕಿ ನಡೆದು, ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಘಟನೆ ಮಂಚಿಕೇರಿಯ ಮಾಗೋಡು ಕ್ರಾಸ್ ಬಳಿ ನಡೆದಿದೆ. ಘಟನೆ ಸಂಬಂಧ ಬೈಂದೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಮಂಚಿಕೇರಿಯ ನಿವಾಸಿಯಾಗಿರುವ ಅಜೇಯ್ ಬಂಡಾರಕರ್ ಭಾನುವಾರ ತಮ್ಮ ನಿವಾಸಕ್ಕೆ ಬಂದಿದ್ದರು. ಈ ವೇಳೆ ತಮ್ಮ ಮನೆ ಹಾಗೂ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಅಂಕೋಲಾದ ಬೇಲಿಕೇರಿಯ ಮೀನುಗಾರ ಮಹಿಳೆ ಸರಸ್ವತಿ ಹಾಗೂ ಮಾಗೋಡಿನ ತರಕಾರಿ ವ್ಯಾಪಾರಿ ಸೀತಲ್ ಲಂಬಾಣಿ ಅವರೊಂದಿಗೆ ಮಾತಿನ ಚಕಮಕಿ ನಡೆದಿದೆ.
ಬಳಿಕ ಪರಸ್ಪರ ಹಲ್ಲೆ ನಡೆದಿದ್ದು, ಈ ವೇಳೆ ಅಜೇಯ್ ಬಂಡಾರಕರ್ ಅವರು ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯ ವೇಳೆ ಮಾರಾಟಕ್ಕೆ ತಂದಿದ್ದ ಮೀನುಗಳು ಚೆಲ್ಲಾಪಿಲ್ಲಿಯಾಗಿದ್ದು, ಮಹಿಳೆಯರಿಗೆ ಗಾಯಗಳಾಗಿವೆ ಎನ್ನಲಾಗಿದೆ.
ಘಟನೆ ಕುರಿತು ಸೋಮವಾರ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


