ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸಾಗರಮಾಲಾ ಯೋಜನೆಯಡಿ ಕಾರವಾರ ಬಂದರು ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಂದ ಸ್ಥಳೀಯ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೆ.ಎಸ್. ಬಸವಂತಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಕಾರವಾರ ವಾಣಿಜ್ಯ ಬಂದರಿಗೆ ಭೇಟಿ ನೀಡಿದ ಸಚಿವರು ಬಂದರು ಅಭಿವೃದ್ಧಿ ಹಾಗೂ ಸಾಗರಮಾಲಾ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಬಂದರು ವಿಸ್ತರಣೆಗೆ ಸ್ಥಳೀಯ ಮೀನುಗಾರರಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಅವರ ಸಮಸ್ಯೆಗಳಿಗೆ ಆದ್ಯತೆ ನೀಡಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಂದರಿನ ಪ್ರಸ್ತಾವಿತ ಬ್ರೇಕ್ವಾಟರ್ ನಿರ್ಮಾಣದ ನೀಲನಕ್ಷೆ ಪರಿಶೀಲಿಸಿದ ಸಚಿವರು, ಯೋಜನೆಯ ವಿವಿಧ ಅಂಶಗಳು ಹಾಗೂ ಬಂದರಿನ ಅಭಿವೃದ್ಧಿ ಸಾಧ್ಯತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಟಗ್ನಲ್ಲಿ ಸಮುದ್ರ ಸಂಚಾರ ನಡೆಸಿ ಬಂದರಿನ ಚಟುವಟಿಕೆಗಳು ಹಾಗೂ ಮೂಲಸೌಕರ್ಯಗಳನ್ನು ವೀಕ್ಷಿಸಿದರು.
ಈ ವೇಳೆ ಶಾಸಕ ಸತೀಶ ಸೈಲ್, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಪಂ ಸಿಇಒ ದೀಲಿಷ್ ಶಶಿ, ಎಸ್ಪಿ ದೀಪನ್ ಎಂ.ಎನ್. ಹಾಗೂ ಬಂದರು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



