ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತಾಲೂಕಿನ ಹಣಕೋಣದ ಶ್ರೀ ಸಾತೇರಿ ಚಣಕಾದೇವಿ (ಕುಲದೇವಿ) ಮಂದಿರದಲ್ಲಿ 2026ನೇ ಸಾಲಿನ ವಾರ್ಷಿಕ ಉತ್ಸವವು ಸೆ.18ರಿಂದ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

Banner Ad

ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುವ ದೇವಿಯ ಮಂದಿರದ ಗರ್ಭಗುಡಿ ದ್ವಾರವು ಸೆ.18ರಂದು ಮಧ್ಯರಾತ್ರಿ 12 ಗಂಟೆಗೆ ತೆರೆಯಲಿದ್ದು, ಸೆ.24ರವರೆಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸೆ.19ರಂದು ಊರಿನ ನಾಗರಿಕರಿಂದ ನವೆ ತೆಗೆದುಕೊಂಡು ದೇವಿಗೆ ಅರ್ಪಿಸುವ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 4 ಗಂಟೆಗೆ ಕುಳಾವಿ ಬಾಂಧವರಿಂದ ‘ತಳಯಿ’ ಅರ್ಪಿಸಲಾಗುವುದು. ಇದೇ ವೇಳೆ ಕುಳಾವಿಯ ಕುಮಾರಿ ಹಾಗೂ ನವವಧುಗಳಿಂದ ‘ಅಡೇಕಿ’ ಅರ್ಪಣೆ ನಡೆಯಲಿದೆ. ಅಂದು ಕುಳಾವಿ ಜನರ ಧಾರ್ಮಿಕ ವಿಧಿ ಇರುವ ಕಾರಣ ಹೊರ ಊರಿನ ಭಕ್ತಾದಿಗಳ ಸೇವೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸಮಿತಿ ತಿಳಿಸಿದೆ.

ಸೆ.20ರಿಂದ 24ರವರೆಗೆ ಬೆಳಿಗ್ಗೆ 8 ಗಂಟೆಯಿಂದ ಸಾರ್ವಜನಿಕ ಭಕ್ತರಿಗೆ ದೇವಿಯ ದರ್ಶನದೊಂದಿಗೆ ಹಣ್ಣು-ಕಾಯಿ, ಉಡಿ, ಹರಕೆ, ತುಲಾಭಾರ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ. ಸೆ.24ರಂದು ಸಂಜೆ 5 ಗಂಟೆಯವರೆಗೆ ಮಾತ್ರ ಸೇವೆಗಳನ್ನು ಸ್ವೀಕರಿಸಲಾಗುವುದು.

ಸೆ.20ರಿಂದ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ದೇವಿಗೆ ಅರ್ಪಿಸಲಾದ ಸೀರೆ ಹಾಗೂ ಇತರ ವಸ್ತುಗಳ ಜಾಹೀರ ಅಲಾವು ನಡೆಯಲಿದೆ. ಸೆ.21ರಿಂದ 24ರವರೆಗೆ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಭಕ್ತರಿಂದ ಅನ್ನಸಂತರ್ಪಣೆ (ಮಹಾಪ್ರಸಾದ) ನಡೆಯಲಿದೆ.

ಸೆ.20ರಿಂದ 23ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9.30ಕ್ಕೆ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ಭಕ್ತರು ಸಹಕುಟುಂಬ, ಸಹಪರಿವಾರ ಹಾಗೂ ಮಿತ್ರರೊಂದಿಗೆ ಆಗಮಿಸಿ ಶ್ರೀ ದೇವಿಯ ಕೃಪಾ ಪ್ರಸಾದಕ್ಕೆ ಪಾತ್ರರಾಗಬೇಕೆಂದು ಅಧ್ಯಕ್ಷರು, ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9404435275, 9880849084, 9011643250, 9481222306 ಸಂಪರ್ಕಿಸಬಹುದು.

 

 

Please Share: