ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಗಣಪತಿ ಪಟಗಾರ ಅವರನ್ನು ಬಾಡ–ನಂದನಗದ್ದ ಪಹರೆ ವೇದಿಕೆ ಘಟಕದ ವತಿಯಿಂದ ರವಿವಾರ ಸನ್ಮಾನಿಸಲಾಯಿತು.
ಬಾಡ–ನಂದನಗದ್ದ ಟೋಲ್ ನಾಕಾ ಸಾರ್ವಜನಿಕ ಗಣಪತಿ ಉತ್ಸವದ ಆವರಣದಲ್ಲಿ ಪಹರೆ ವೇದಿಕೆಯ 231ನೇ ವಾರದ ಸ್ವಚ್ಛತಾ ಕಾರ್ಯ ನಡೆಯಿತು. ಇದೇ ಸಂದರ್ಭದಲ್ಲಿ ಗಣಪತಿ ಪಟಗಾರ ಅವರಿಗೆ ಮೈಸೂರು ಪೇಟ ತೊಡಿಸಿ, ಹಾರ, ಫಲಪುಷ್ಪ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು.

ನಿವೃತ್ತ ಪ್ರಾಚಾರ್ಯ ಜಿ.ಪಿ. ನಾಯಕ ಮಾತನಾಡಿ, ಪಟಗಾರ ಅವರು 18 ವರ್ಷಗಳ ಕಾಲ ತಮ್ಮೊಂದಿಗೆ ಒಂದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದು, ಸರಳ, ಕಷ್ಟಜೀವಿ ಹಾಗೂ ಧೈರ್ಯಶಾಲಿಯಾಗಿದ್ದಾರೆ. ಅತಿಥಿ ಉಪನ್ಯಾಸಕರ ಸಂಘಟನೆ ಮೂಲಕ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಿ, ಅವರ ಸಂಬಳ ಹೆಚ್ಚಳಕ್ಕೆ ಪ್ರಮುಖ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗದ ಮಾಹಿತಿ ನೀಡಿ ಅವರ ಭವಿಷ್ಯ ರೂಪಿಸಲು ಸಹಕರಿಸಿದ್ದಾರೆ ಎಂದರು.
ಜಗದೀಶ ಗಾಂವಕರ, ಎಲ್.ಎಸ್. ಫರ್ನಾಂಡಿಸ್, ಶ್ರೀಕಾಂತ ನಾಯ್ಕ ಹಾಗೂ ತೇಜಸ್ವಿನಿ ನಾಯ್ಕ ಮಾತನಾಡಿ, ಗಣಪತಿ ಪಟಗಾರ ಅವರು ಉತ್ತಮ ಉಪನ್ಯಾಸಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಪಹರೆ ಘಟಕಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣಪತಿ ಪಟಗಾರ, ಸುಮಾರು 26 ವರ್ಷಗಳ ಅವಧಿಯಲ್ಲಿ ಹೊನ್ನಾವರ, ಅಂಕೋಲಾ, ಉಡುಪಿ ಹಾಗೂ ಕಾರವಾರದ ಕಾಲೇಜುಗಳಲ್ಲಿ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದು, ಅವರ ಉಜ್ವಲ ಭವಿಷ್ಯಕ್ಕೆ ಸಹಕರಿಸಿದ್ದೇನೆ. ಶಿಕ್ಷಣ ಸೇವೆಯೊಂದಿಗೆ ಸ್ವಚ್ಛತೆ ಸೇರಿದಂತೆ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯನ್ನು ರವಿ ಮಾಳ್ಸೇಕರ್, ಮಂಜುನಾಥ ನಾಯ್ಕ, ದೀಪಕ್ ವರ್ಣೇಕರ್, ರಘುವೀರ ಪಿ. ನಾಯ್ಕ ಹಾಗೂ ವಿಲಾಸ್ ತಳೇಕರ್ ನಿರ್ಮಿಸಿದರು. ಡಿ.ಟಿ. ನಾಯ್ಕ, ದೀಪಾಲಿ ನಾಯ್ಕ, ತಾರಾ ಅಂಚೆಕರ್, ಮಾಯಾ ನಾಯ್ಕ, ಪದ್ಮ ಪಾಲೇಕರ್, ತೇಜಸ್ವಿನಿ ನಾಯ್ಕ, ನಂದಾ ಟಿ. ನಾಯ್ಕ, ಅರುಣ್ ಮಾಜಾಳಿಕರ್, ಸುರೇಶ್ ಮಾಳ್ಸೇಕರ್, ಸಂಜಯ ಚಿಪ್ಕರ್ ಸೇರಿದಂತೆ ಪಹರೆ ಘಟಕದ ಸದಸ್ಯರು ಉಪಸ್ಥಿತರಿದ್ದರು. ಎಲ್.ಎಸ್. ಫರ್ನಾಂಡಿಸ್ ನಿರೂಪಿಸಿದರು. ತೇಜಸ್ವಿನಿ ನಾಯ್ಕ ವಂದಿಸಿದರು.


