ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ದೇಶದ ಅರಣ್ಯ ಸಂಪತ್ತು, ವನ್ಯಜೀವಿ ಹಾಗೂ ಪರಿಸರ ರಕ್ಷಣೆಯ ಕರ್ತವ್ಯದಲ್ಲಿ ಪ್ರಾಣ ತ್ಯಾಗ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗ ಸ್ಮರಣೀಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಹೇಳಿದರು.

Banner Ad

ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಅರಣ್ಯಗಳು ಕೇವಲ ಮರಗಳ ಸಮೂಹವಲ್ಲ; ಮಳೆ, ನದಿಗಳು, ಅಂತರ್ಜಲ, ಮಣ್ಣಿನ ಫಲವತ್ತತೆ, ವನ್ಯಜೀವಿ ಹಾಗೂ ಮಾನವನ ಆರೋಗ್ಯದೊಂದಿಗೆ ನೇರ ಸಂಬಂಧ ಹೊಂದಿರುವ ಪರಿಸರ ವ್ಯವಸ್ಥೆಯ ಜೀವನಾಡಿ ಎಂದರು.

ಪರಿಸರ ಸಂರಕ್ಷಣೆ ಅರಣ್ಯ ಇಲಾಖೆಯೊಂದರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸಂವಿಧಾನದ ವಿಧಿ 48ಎ ರಾಜ್ಯ ಸರ್ಕಾರಗಳಿಗೆ ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ನಿರ್ದೇಶನ ನೀಡಿದರೆ, ವಿಧಿ 51ಎ ನಾಗರಿಕರು ನೈಸರ್ಗಿಕ ಪರಿಸರ, ಅರಣ್ಯ, ನದಿಗಳು, ಸರೋವರ ಹಾಗೂ ವನ್ಯಜೀವಿಗಳನ್ನು ರಕ್ಷಿಸುವುದನ್ನು ಕರ್ತವ್ಯವನ್ನಾಗಿ ಮಾಡಿದೆ ಎಂದು ತಿಳಿಸಿದರು.

ಅರಣ್ಯ ಹುತಾತ್ಮರ ದಿನಾಚರಣೆ ಕೇವಲ ಪುಷ್ಪ ನಮನಕ್ಕೆ ಸೀಮಿತವಾಗದೆ, ಹುತಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ಅರಣ್ಯ ರಕ್ಷಣೆ ಎಂದರೆ ನಮ್ಮ ಭವಿಷ್ಯದ ರಕ್ಷಣೆ ಎಂಬ ಸಂದೇಶವನ್ನು ಎಲ್ಲರೂ ಮನಗಾಣಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ನಾಯಕ ಹುತಾತ್ಮರಾದ 65 ಅರಣ್ಯ ಸಿಬ್ಬಂದಿಯ ಹೆಸರುಗಳನ್ನು ವಾಚಿಸಿದರು. ಹುತಾತ್ಮರ ಗೌರವಾರ್ಥ ಮೂರು ಸುತ್ತು ಗುಂಡು ಹಾರಿಸಲಾಯಿತು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಷ್ ಶಶಿ, ಐಡಿಎಎಸ್‌ (ನೌಕಾನೆಲೆ) ರಜತ ಕುಮಾರ, ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಮಂಜುನಾಥ ಜಿ.ನಾವಿ, ಸಿಆರ್‌ಝಡ್ ಪ್ರಾದೇಶಿಕ ನಿರ್ದೇಶಕ ಪ್ರವೀಣ್ ಬಸ್ರೂರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗಜಾನನ ಹೆಗಡೆ, ಪ್ರಪುಲ್ಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಉಪ ವಲಯ ಅರಣ್ಯಾಧಿಕಾರಿ ಗಣಪತಿ ನಿರೂಪಿಸಿ, ವಂದಿಸಿದರು.

 

 

Please Share: