ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿ ಹಾಗೂ ತಾರತಮ್ಯಪೂರಿತ ಪಿಎಲ್‌ಐ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಮುಷ್ಕರದ ಅಂಗವಾಗಿ ಶುಕ್ರವಾರ ಕಾರವಾರದಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಬ್ಯಾಂಕ್ ಉದ್ಯೋಗಿ ಸಂಘಟನೆಗಳ ಒಕ್ಕೂಟದ ಸಂಚಾಲಕ ವಾಸುದೇವ್ ಶೇಟ್, ಬ್ಯಾಂಕ್ ಉದ್ಯೋಗಿ ಸಂಘಟನೆಗಳೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದಗಳನ್ನು ಕಡೆಗಣಿಸಿ ಕೇಂದ್ರ ಹಣಕಾಸು ಇಲಾಖೆ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದರಿಂದ ಮುಷ್ಕರ ಅನಿವಾರ್ಯವಾಗಿದೆ ಎಂದು ಹೇಳಿದರು.

ಬ್ಯಾಂಕ್ ವಿಲೀನ, ಸಿಬ್ಬಂದಿ ಕೊರತೆ ಹಾಗೂ ನಿರಂತರವಾಗಿ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಉದ್ಯೋಗಿಗಳ ಮೇಲಿನ ಕೆಲಸದ ಒತ್ತಡ ಹೆಚ್ಚಾಗಿದೆ. ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ಜಾರಿಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ಉದ್ಯೋಗಿಗಳು ಒಪ್ಪಿಕೊಂಡು ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್ ಜತೆ ಒಪ್ಪಂದ ಮಾಡಿಕೊಂಡಿದ್ದರೂ 30 ತಿಂಗಳು ಕಳೆದರೂ ಅದು ಜಾರಿಯಾಗಿಲ್ಲ ಎಂದು ತಿಳಿಸಿದರು.
ಪಿಎಲ್‌ಐ ಯೋಜನೆಯನ್ನು ಏಕಪಕ್ಷೀಯವಾಗಿ ಬದಲಿಸಿ ಜಾರಿಗೊಳಿಸಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಬೇಡಿಕೆಗಳು ಈಡೇರದಿದ್ದರೆ ಸೆ.28ರಿಂದ ಮೂರು ದಿನಗಳ ಹಾಗೂ ಅ.26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಿದ್ಧರಾಗುವಂತೆ ಕರೆ ನೀಡಿದರು.
ಮುಷ್ಕರದ ಹಿನ್ನೆಲೆಯಲ್ಲಿ ಕಾರವಾರದ ಎಲ್ಲಾ ರಾಷ್ಟ್ರೀಕೃತ ಹಾಗೂ ಹಳೆಯ ತಲೆಮಾರಿನ ಖಾಸಗಿ ಬ್ಯಾಂಕ್‌ಗಳು ಬಂದ್ ಆಗಿದ್ದವು. 120ಕ್ಕೂ ಹೆಚ್ಚು ಬ್ಯಾಂಕ್ ನೌಕರರು ಒಂದು ಗಂಟೆಗೂ ಹೆಚ್ಚು ಕಾಲ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಸನ್ನಿ ನಾಯಕ್, ಸಂದೀಪ್ ಹುಳಗೆಕರ್, ಸಮೀರ್ ಶೇಕ್, ಗಜಾನನ್ ನಾಯ್ಕ, ದೀಪಾ ನಾಯ್ಕ, ಅಧಿಕಾರಿಗಳ ಸಂಘದ ಎನ್.ಆರ್. ಪ್ರಭು, ಎಸ್‌ಬಿಐನ ಸುಮಿತ್ ನಾಯಕ್, ಬೀನಾ ಜಿ. ಸೇರಿದಂತೆ ಹಲವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.


