ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ತಾಲ್ಲೂಕಿನ ಬಿರಖೋಲ ಗ್ರಾಮದ ಕೊಡಥಳ್ಳಿ (ಸೂಳಗೇರಿ) ನಿವಾಸಿಗಳು ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲಾತಿ ಬದಲಾವಣೆ ಮಾಡುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಬಿರಖೋಲ ಗ್ರಾಮ, ಕೊಡಥಳ್ಳಿ ಗ್ರಾಮವನ್ನು ಒಳಗೊಂಡಿರುವ ಉಳವಿ ವಾರ್ಡ್‌ಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅನುಸೂಚಿತ ಪಂಗಡ (ಎಸ್‌ಟಿ) ಮಹಿಳೆ ಮೀಸಲಾತಿ ನಿಗದಿಪಡಿಸಲಾಗಿದೆ. ಆದರೆ ಈ ಗ್ರಾಮದಲ್ಲಿ ಅನುಸೂಚಿತ ಪಂಗಡಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳು ಇಲ್ಲದ ಕಾರಣ, ನಿಗದಿಪಡಿಸಿರುವ ಮೀಸಲಾತಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ, ಪ್ರಸ್ತುತ ನಿಗದಿಪಡಿಸಿರುವ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿಯನ್ನು ಬದಲಿಸಿ, ಅರ್ಹ ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶವಾಗುವಂತೆ ಬೇರೆ ಮೀಸಲಾತಿ ನಿಗದಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆಗೆ ಜೋಯಿಡಾ ತಹಶೀಲ್ದಾರ್ ಹಾಗೂ ಉಳವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೂ ಮನವಿ ಸಲ್ಲಿಸಲಾಗಿದೆ.


