ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಸಹೋದರ–ಸಹೋದರಿಯರ ಬಾಂಧವ್ಯದ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬಕ್ಕೆ ಸಾಮಾಜಿಕ ಸೇವೆಯ ಸ್ಪರ್ಶ ನೀಡಿದ ಕಾರವಾರ ನಗರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿತು.

Banner Ad

ಪ್ರತಿ ವರ್ಷದಂತೆ ಈ ಬಾರಿಯೂ ಮಹಿಳಾ ಮೋರ್ಚಾ ವತಿಯಿಂದ ನಗರದ ವಿವಿಧೆಡೆ ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಅಧಿಕಾರಿಗಳು, ಪೌರ ಕಾರ್ಮಿಕರು, ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಿಗೆ ರಾಖಿ ಕಟ್ಟಿ, ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಲಾಯಿತು.

ಸಮಾಜದ ಸುರಕ್ಷತೆ, ಸ್ವಚ್ಛತೆ ಹಾಗೂ ನಾಗರಿಕರ ಸೇವೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಖಿ ಕಟ್ಟುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸುವುದರ ಜತೆಗೆ, ಸಮಾಜದಲ್ಲಿ ಪರಸ್ಪರ ಸಹಕಾರ, ಸಹೋದರತ್ವ ಹಾಗೂ ಸೌಹಾರ್ದದ ಸಂದೇಶ ಸಾರಲಾಯಿತು.

ಈ ಸಂದರ್ಭದಲ್ಲಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ವೈಶಾಲಿ ತಾಂಡೆಲ್, ಪ್ರಧಾನ ಕಾರ್ಯದರ್ಶಿ ವಿಜಯಾ ಅಣ್ವೇಕರ, ಆರಾಧ್ಯ ಕಲ್ಯಾಣಕರ್, ಸ್ನೇಹಾ ಗಾಂವ್ಕಾರ್, ದೀಪಾ ಪವಾರ್, ಕಾಂಚನಾ ಮಾಳ್ಸೆಕರ್, ವಿದ್ಯಾ ಮೊರ್ಜೆ ಸೇರಿದಂತೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

 

 

Please Share: