ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ವೊಂದು ಮುಳುಗಡೆಯಾದ ಪರಿಣಾಮ, ಅದರಲ್ಲಿದ್ದ 24 ಮಂದಿ ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ರವಿವಾರ ನಸುಕಿನ ವೇಳೆ ಅಂಜದೀವ್ ದ್ವೀಪದ ಸಮೀಪ ನಡೆದಿದೆ.

ಬೆಳ್ಳಂಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್‌ ಸಮುದ್ರದಲ್ಲಿ ಅವಘಡಕ್ಕೀಡಾಗಿ ಮುಳುಗಡೆಯಾಗಿದೆ. ಬೋಟ್‌ ಅಪಾಯಕ್ಕೆ ಸಿಲುಕುತ್ತಿದ್ದಂತೆ, ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ಬೋಟ್‌ನಲ್ಲಿದ್ದ 24 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮುಳುಗಡೆಯಾಗುತ್ತಿದ್ದ ಬೋಟ್‌ ಅನ್ನು ಉಳಿಸಿಕೊಳ್ಳುವ ಪ್ರಯತ್ನವೂ ಮುಂದುವರಿದಿದ್ದು, ಇತರೆ ಮೀನುಗಾರಿಕಾ ಬೋಟ್‌ಗಳಿಗೆ ಹಗ್ಗ ಕಟ್ಟಿ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಘಟನೆಯಿಂದ ಬೋಟ್‌ ಹಾಗೂ ಮೀನುಗಾರಿಕಾ ಪರಿಕರಗಳಿಗೆ ಸೇರಿ ₹80 ಲಕ್ಷಕ್ಕೂ ಅಧಿಕ ನಷ್ಟವಾಗಿರುವ ಅಂದಾಜು ವ್ಯಕ್ತವಾಗಿದೆ.

ಪದೇಪದೇ ಅವಘಡ; ಮೀನುಗಾರರಲ್ಲಿ ಆತಂಕ

ಸ್ಥಳೀಯರ ಮಾಹಿತಿ ಪ್ರಕಾರ, ನೀಲಕಂಠ ಖಾರ್ವಿ ಅವರಿಗೆ ಸೇರಿದ ಬೋಟ್‌ಗಳು ಪದೇಪದೇ ಅವಘಡಕ್ಕೆ ಸಿಲುಕುತ್ತಿರುವುದು ಕುಟುಂಬಕ್ಕೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಮೊದಲ ಬೋಟ್‌ ಕೂಡ ಇದೇ ರೀತಿಯ ಅವಘಡದಲ್ಲಿ ಸಿಲುಕಿ ಹಾನಿಗೀಡಾಗಿತ್ತು. ಬಳಿಕ ಖರೀದಿಸಿದ್ದ ಎರಡನೇ ಬೋಟ್‌ ಕೂಡ ಹಾನಿಗೊಳಗಾಗಿತ್ತು. ಇದೀಗ ಮೂರನೇ ಬೋಟ್‌ ಕೂಡ ಅವಘಡಕ್ಕೀಡಾಗಿರುವುದು ‘ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಬೋಟ್‌ ಮುಳುಗಡೆಯಿಂದ ಭಾರಿ ಆರ್ಥಿಕ ನಷ್ಟ ಸಂಭವಿಸಿರುವ ಹಿನ್ನೆಲೆಯಲ್ಲಿ, ಸರ್ಕಾರ ಮೀನುಗಾರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿ ಹಾಗೂ ಮುಳುಗಡೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

 

 

 

 

Please Share: