ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಅಮದಳ್ಳಿ ಭಾಗದಲ್ಲಿ ಓಸಿ ಮಟ್ಕಾ ದಂಧೆ ಇನ್ನೂ ಮುಂದುವರಿದಿರುವ ಆರೋಪಗಳು ಕೇಳಿಬರುತ್ತಿದ್ದು, ಅಕ್ರಮಕ್ಕೆ ಶಾಶ್ವತ ಕಡಿವಾಣ ಹಾಕಲು ಪೊಲೀಸ್ ಇಲಾಖೆ ನಿರಂತರ ಮತ್ತು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಇತ್ತೀಚೆಗೆ ಕಾರವಾರ ಗ್ರಾಮೀಣ ಪೊಲೀಸರು ಜಡಿಗದ್ದ–ಅಮದಳ್ಳಿ ಸಾರ್ವಜನಿಕ ರಸ್ತೆಯಲ್ಲಿ ನಡೆಸಿದ ದಾಳಿಯಲ್ಲಿ ಮುದಗಾ ನಿವಾಸಿ ಸುರೇಂದ್ರ ವಸಂತ ನಾಯ್ಕ (49) ಅವರನ್ನು ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದಡಿ ಬಂಧಿಸಿದ್ದಾರೆ. ಆರೋಪಿಯು “ಒಂದು ರೂಪಾಯಿಗೆ 80 ರೂಪಾಯಿ” ನೀಡುವುದಾಗಿ ಸಾರ್ವಜನಿಕರನ್ನು ಆಕರ್ಷಿಸಿ, ಅಂಕೆ-ಸಂಖ್ಯೆಗಳ ಮೇಲೆ ಪಂತ ಕಟ್ಟಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಆರೋಪಿಯಿಂದ ನಗದು ಹಾಗೂ ಓಸಿ ಮಟ್ಕಾ ಜೂಜಾಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಸರ್ಕಾರದ ಪರವಾಗಿ ದಾಖಲಾದ ದೂರಿನ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(iii) ಅಡಿಯಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಈ ಘಟನೆ ಅಮದಳ್ಳಿ ಭಾಗದಲ್ಲಿ ಮಟ್ಕಾ ಚಟುವಟಿಕೆ ಸಂಪೂರ್ಣವಾಗಿ ನಿಂತಿಲ್ಲ ಎಂಬ ಪ್ರಶ್ನೆಯನ್ನು ಮತ್ತೆ ಎಬ್ಬಿಸಿದೆ. ಒಬ್ಬ ಆರೋಪಿಯನ್ನು ಬಂಧಿಸುವುದಷ್ಟೇ ಅಲ್ಲದೆ, ಇಂತಹ ಅಕ್ರಮದ ಹಿಂದಿರುವ ಜಾಲವನ್ನು ಪತ್ತೆಹಚ್ಚಿ ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುಲಭವಾಗಿ ಹಣ ಗಳಿಸುವ ಆಮಿಷಕ್ಕೆ ಬಲಿಯಾಗುವವರಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ, ಇಂತಹ ದಂಧೆಗಳ ವಿರುದ್ಧ ನಿರಂತರ ದಾಳಿ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
