ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ಖಾತೆದಾರರು ಜಮಾ ಮಾಡಿದ ಹಣವನ್ನು ಅವರ ಖಾತೆಗೆ ದಾಖಲಿಸದೆ ಸ್ವಂತ ಬಳಕೆಗೆ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಅಂಚೆ ಪಾಲಕನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿವಪ್ಪ ಕರಗುಪ್ಪ ಎಂದು ಗುರುತಿಸಲಾಗಿದೆ. ಆತ ಮುಂಡಗೋಡ ಉಪ ಅಂಚೆ ಕಚೇರಿಗೆ ಒಳಪಡುವ ಇಂದೂರು ಅಂಚೆ ಕಚೇರಿಯಲ್ಲಿ ಗ್ರಾಮೀಣ ಅಂಚೆ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು.

ದೂರಿನ ಪ್ರಕಾರ, 2024ರ ಅಕ್ಟೋಬರ್ 29ರಿಂದ 2025ರ ಆಗಸ್ಟ್ 14ರವರೆಗೆ ಕರ್ತವ್ಯದಲ್ಲಿದ್ದ ವೇಳೆ ಖಾತೆದಾರರು ಜಮಾ ಮಾಡಿದ ಸುಮಾರು ₹78,000 ಹಣವನ್ನು ಸಂಬಂಧಿತ ಖಾತೆಗಳಿಗೆ ಜಮಾ ಮಾಡದೇ ಸ್ವಂತ ಬಳಕೆಗೆ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಕೃತ್ಯದಿಂದ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಿರುವುದಲ್ಲದೆ, ಇಲಾಖೆಯ ಕರ್ತವ್ಯಕ್ಕೂ ನಂಬಿಕೆದ್ರೋಹ ಎಸಗಿರುವ ಆರೋಪವೂ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು 2025ರ ಆಗಸ್ಟ್ 14ರಂದು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಪ್ರಕರಣದ ಕುರಿತು ತನಿಖೆ ನಡೆಸುವಂತೆ ದಾಂಡೇಲಿ ಅಂಚೆ ಉಪವಿಭಾಗದ ನಿರೀಕ್ಷಕ ಶಿವಾನಂದ ದೊಡ್ಡಮನಿ ಅವರು ನೀಡಿದ ದೂರಿನ ಆಧಾರದ ಮೇಲೆ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Please Share: