ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ಮೀಟರ್ ಬಡ್ಡಿ ದಂಧೆಗೆ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ, ಮುಂಡಗೋಡಿನಲ್ಲಿ ಅಕ್ರಮ ಬಡ್ಡಿ ವ್ಯವಹಾರ ಇನ್ನೂ ಬೇರು ಬಿಟ್ಟಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಬುಧವಾರ ಬೆಳಿಗ್ಗೆ 14 ಮನೆಗಳ ಮೇಲೆ ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ಖಾಲಿ ಚೆಕ್‌ಗಳು, ಬಾಂಡ್ ಪತ್ರಗಳು ಹಾಗೂ ಜಿಂಕೆ ಕೊಂಬುಗಳು ಪತ್ತೆಯಾಗಿದ್ದು, ಪ್ರಕರಣ ದಾಖಲಾಗಿದೆ.

ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಟ್ಟಣದ ವಿವಿಧ ಭಾಗಗಳ 14 ಮನೆಗಳನ್ನು ಪರಿಶೀಲಿಸಲಾಯಿತು. ಈ ವೇಳೆ ತೌಸಿಪ್ ಪಣಿಬಂದ ಎಂಬುವರ ಮನೆಯಲ್ಲಿ 8 ಖಾಲಿ ಚೆಕ್‌ಗಳು ಹಾಗೂ ಬಾಂಡ್ ಪತ್ರಗಳು ಪತ್ತೆಯಾಗಿವೆ.

ಇನ್ನೊಂದು ದಾಳಿಯಲ್ಲಿ ಮೊಹಮ್ಮದ್ ಪಾನವಾಲೆ ಅವರ ಮನೆಯಲ್ಲಿ ಎರಡು ಜಿಂಕೆ ಕೊಂಬುಗಳು ಪತ್ತೆಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತನಿಖೆ ನಡೆಸಲಾಗುತ್ತಿದೆ.

ಪತ್ತೆಯಾದ ದಾಖಲೆಗಳು ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಮೀಟರ್ ಬಡ್ಡಿ ದಂಧೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.

ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಕಳೆದ ಒಂದೂವರೆ ವರ್ಷದಲ್ಲಿ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ವಿರುದ್ಧ 63 ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಅವಧಿಯಲ್ಲಿ 58 ಮಂದಿಯನ್ನು ಬಂಧಿಸಲಾಗಿದ್ದು, ಇಬ್ಬರು ರೌಡಿಶೀಟರ್‌ಗಳನ್ನು ಬಳ್ಳಾರಿ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ.

ಸತತ ಕಾರ್ಯಾಚರಣೆಗಳಿಂದ ಮೀಟರ್ ಬಡ್ಡಿ ದಂಧೆ ಕಡಿಮೆಯಾಗಿದೆ ಎನ್ನಲಾಗುತ್ತಿದ್ದರೂ, ಇತ್ತೀಚಿನ ದಾಳಿ ದಂಧೆಯ ಜಾಲ ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

 

Please Share: