ಕರಾವಳಿ ವಾಯ್ಸ್ ನ್ಯೂಸ್
ಕಾರವಾರ, ಜೂ.24: ರಾಷ್ಟ್ರೀಯ ಹೆದ್ದಾರಿ-66ರ ಕೋಡಿಬಾಗದ ಉಜ್ವಲಲಕ್ಷ್ಮೀ ಹಾಲ್ ಸಮೀಪ ಬುಧವಾರ ಬೆಳಿಗ್ಗೆ ಟೊಯೋಟಾ ಫಾರ್ಚೂನರ್ ಹಾಗೂ ಮಹೇಂದ್ರ ಬೊಲೆರೋ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೊಲೆರೋ ವಾಹನ ಪಲ್ಟಿಯಾಗಿ, ಇಬ್ಬರು ಗಾಯಗೊಂಡಿದ್ದಾರೆ.
ಕುಮಟಾ ನಿವಾಸಿ ಲಕ್ಷ್ಮಣಸಿಂಗ್ ಮಂಗುಸಿಂಗ್ ರಾಢೋರ್ (31) ಅವರು ಟೊಯೋಟಾ ಫಾರ್ಚೂನರ್ (ಕೆಎ-47-ಪಿ-0786) ವಾಹನವನ್ನು ಚಿತ್ತಾಕುಲ ಕಡೆಯಿಂದ ಕಾರವಾರದತ್ತ ಚಲಾಯಿಸಿಕೊಂಡು ಬರುತ್ತಿದ್ದರು. ಬೆಳಿಗ್ಗೆ ಸುಮಾರು 8.20ರ ವೇಳೆಗೆ ಕೋಡಿಬಾಗದ ಉಜ್ವಲಲಕ್ಷ್ಮೀ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಮುಂದೆ ಸಾಗುತ್ತಿದ್ದ ಮಹೇಂದ್ರ ಬೊಲೆರೋ (ಕೆಎ-30-ಎ-4297) ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ಫಾರ್ಚೂನರ್ ವಾಹನ ಬೊಲೆರೋದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬೊಲೆರೋ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಪರಿಣಾಮವಾಗಿ ಬೊಲೆರೋದಲ್ಲಿದ್ದ ಉತ್ತರ ಪ್ರದೇಶ ಮೂಲದ, ಪ್ರಸ್ತುತ ಸದಾಶಿವಗಡದಲ್ಲಿ ವಾಸವಾಗಿರುವ ಸುಶೀಲಕುಮಾರ ಜವಾಹರಲಾಲ್ (34) ಹಾಗೂ ನಿಪ್ಪಾಣಿ ಮೂಲದ ಅಭಿಜೀತ್ ಸುರೇಶ್ ನಾಯ್ಕ (39) ಗಾಯಗೊಂಡಿದ್ದಾರೆ. ಇಬ್ಬರೂ ಇಂಜಿನಿಯರ್‌ಗಳಾಗಿದ್ದು, ಅವರಿಗೆ ಗಾಯಗಳಾಗಿವೆ.
ಅಪಘಾತದ ವೇಳೆ ಬೊಲೆರೋವನ್ನು ಚಿತ್ತಾಕುಲದ ದೇಸಾಯಿವಾಡ ನಿವಾಸಿ ಮೈಕಲ್ ಬೈತುರ ಡಿನಿಜ್ (57) ಚಾಲನೆ ಮಾಡುತ್ತಿದ್ದರು. ಅವರು ನೀಡಿದ ದೂರಿನ ಮೇರೆಗೆ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದಡಿ ಫಾರ್ಚೂನರ್ ಚಾಲಕ ಲಕ್ಷ್ಮಣಸಿಂಗ್ ಮಂಗುಸಿಂಗ್ ರಾಢೋರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
