ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ, ಜೂ.5: ತಾಲೂಕಿನ ಮಾವಿನಗುಂಡಿ ಶಾಖೆಯ ಹಲಗೇರಿ ಗಸ್ತಿನ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂದೂಕಿನಿಂದ ವನ್ಯಜೀವಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ.

Banner Ad

ಆರೋಪಿತರು ಕಡವೆ ಹಾಗೂ ಬರ್ಕ ಪ್ರಾಣಿಗಳನ್ನು ಗುಂಡಿಕ್ಕಿ ಕೊಂದು ಮಹೇಂದ್ರ ಪಿಕಪ್ ವಾಹನ (ಕೆಎ-17 ಬಿ-4291)ದಲ್ಲಿ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹುಸೂರು ಗ್ರಾಮದ ಅರಣ್ಯ ಸರ್ವೆ ನಂ.210ರ ಗದ್ದೆಗಳಿಗೆ ತೆರಳುವ ಕಚ್ಚಾ ರಸ್ತೆಯಲ್ಲಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದರು.

ಈ ವೇಳೆ ವಾಹನದಲ್ಲಿ ಮೃತಪಟ್ಟ ಹೆಣ್ಣು ಕಡವೆ ಹಾಗೂ ಗಂಡು ಬರ್ಕ ಪತ್ತೆಯಾಗಿದ್ದು, ಬಳಸಿದ ಬಂದೂಕು, ವಾಹನ ಹಾಗೂ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ವಿರೇಂದ್ರ ಮಾರುತಿ ನಾಯ್ಕ (ಹುಸೂರು), ಶಿವಾನಂದ ಮಹಾಬಲೇಶ್ವರ ನಾಯ್ಕ (ಕುಂಬಾರಕುಳಿ) ಹಾಗೂ ವಾಸುದೇವ ಈರ ನಾಯ್ಕ (ಸುಂಕತ್ತಿ) ಎಂದು ಗುರುತಿಸಲಾಗಿದೆ.

ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರಡಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ದಾಂಡೇಲಿಯ ವನ್ಯಜೀವಿ ವಿಧಿವಿಜ್ಞಾನ ತಜ್ಞ ಮಧುಸೂದನ ಎಸ್. ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ಯು.ಜೆ. ಅವರ ಮಾರ್ಗದರ್ಶನದಲ್ಲಿ, ಸಿದ್ದಾಪುರ ವಲಯ ಅರಣ್ಯಾಧಿಕಾರಿ ಅಜಯಕುಮಾರ ಎಮ್.ಎಸ್. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

 

 

 

Please Share: