ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತಾಲೂಕಿನ ಶೇಜವಾಡದ ಕೆಳಗಿನ ಮಕ್ಕೇರಿ ಬಳಿ 20 ಅಡಿ ಆಳದ ತೆರೆದ ಬಾವಿಗೆ ಕಾಲುಜಾರಿ ಬಿದ್ದ ಎಮ್ಮೆಯನ್ನು ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಪ್ರಮೀಳಾ ನಾಯ್ಕ ಅವರಿಗೆ ಸೇರಿದ ಬಾವಿಗೆ ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಎಮ್ಮೆ ಆಕಸ್ಮಿಕವಾಗಿ ಬಿದ್ದಿದ್ದು, ಬಾವಿಯಲ್ಲಿ ಸುಮಾರು 5 ಅಡಿ ನೀರು ಇದ್ದ ಕಾರಣ ಎಮ್ಮೆ ಹೊರಬರಲಾಗದೆ ಒದ್ದಾಡುತ್ತಿತ್ತು. ಎಮ್ಮೆಯ ಕಿರುಚಾಟ ಕೇಳಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಗ್ಗದ ಸಹಾಯದಿಂದ ಎಮ್ಮೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಲಾಯಿತು.

ರಕ್ಷಿಸಲ್ಪಟ್ಟ ಎಮ್ಮೆ ಸುರಕ್ಷಿತವಾಗಿರುವುದನ್ನು ಕಂಡ ಮಾಲಕ ಅಶೋಕ ನಾಯ್ಕ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಎನ್. ಗೌಡ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ವಿನಾಯಕ ನಾಯ್ಕ, ಬಸವರಾಜ್ ಉಳ್ಳಾಗಡ್ಡಿ, ಮಿಥುನ್ ಅಂಕೋಲೆಕರ ಹಾಗೂ ವೀರಭದ್ರಯ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

 

Please Share: