ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಮೈಂಗಿಣಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ಗಿಡಗಂಟಿಗಳ ಮಧ್ಯೆ ಮರೆಯಿಟ್ಟು ಸಂಗ್ರಹಿಸಲಾಗಿದ್ದ ನೂರಾರು ಲೀಟರ್ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ಅವರ ನಿರ್ದೇಶನದ ಮೇರೆಗೆ ಕಾರವಾರ ಉಪ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 6.30ರ ಸುಮಾರಿಗೆ ನಡೆಸಿದ ದಾಳಿಯಲ್ಲಿ ಈ ಅಕ್ರಮ ಚಟುವಟಿಕೆ ಪತ್ತೆಯಾಗಿದೆ.
ಮೈಂಗಿಣಿ ಸಮೀಪದ ಅರಣ್ಯ ಪ್ರದೇಶದಲ್ಲಿ ಗಿಡಗಂಟಿಗಳ ನಡುವೆ ಎರಡು ವಿಭಿನ್ನ ಸ್ಥಳಗಳಲ್ಲಿ ನೈಲಾನ್ ಚೀಲಗಳಲ್ಲಿ ಮದ್ಯ ಸಂಗ್ರಹಿಸಿರುವುದು ಕಂಡುಬಂದಿದೆ. ಪರಿಶೀಲನೆ ವೇಳೆ ಒಟ್ಟು 5 ಚೀಲಗಳಲ್ಲಿ ಅಡಗಿಸಿದ್ದ 107 ಲೀಟರ್ ಗೋವಾ ಮದ್ಯ ಹಾಗೂ 12 ಲೀಟರ್ ಬಿಯರ್ ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡ ಮದ್ಯದ ಒಟ್ಟು ಅಂದಾಜು ಮೌಲ್ಯ ₹64,480 ಆಗಿದ್ದು, ಪ್ರಕರಣವನ್ನು ಕಾರವಾರ ಉಪ ವಿಭಾಗ ಕಚೇರಿಯಲ್ಲಿ ದಾಖಲಿಸಲಾಗಿದೆ.
ಅರಣ್ಯ ಪ್ರದೇಶವನ್ನು ಮದ್ಯ ಸಂಗ್ರಹ ಕೇಂದ್ರವಾಗಿ ಬಳಸಿರುವುದು ಅಕ್ರಮ ಜಾಲದ ಕಾರ್ಯವೈಖರಿಯನ್ನು ಬಯಲಿಗೆಳೆದಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.

