ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

Banner Ad

ಬಂಧಿತ ಆರೋಪಿಯನ್ನು ತಾಲೂಕಿನ ಹೆಬ್ಬಳೆ ನಿವಾಸಿ, 24 ವರ್ಷದ ಅಬ್ರಾರ್ ಮೊಹಿದ್ದೀನ್ ಶೇಖ್ ಎಂದು ಗುರುತಿಸಲಾಗಿದೆ. ಈತ ಚಾಲಕರಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಭಟ್ಕಳ ಶಹರದ ಮುಗ್ಧಂ ಕಾಲೋನಿಯ ಮೌಂಟೇನ್ ಗ್ರೌಂಡ್ ಸಮೀಪದಲ್ಲಿ ಬಿಳಿ ಬಣ್ಣದ ಹೋಂಡಾ ಸಿಟಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿ ಆಧರಿಸಿ ಪಿಎಸ್‌ಐ ನವೀನ್ ನಾಯ್ಕ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು.

ದಾಳಿಯ ವೇಳೆ ಆರೋಪಿಯಿಂದ ಸುಮಾರು ₹5,000 ಮೌಲ್ಯದ 84 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಲಾಗಿದ್ದ ₹5 ಲಕ್ಷ ಮೌಲ್ಯದ ಹೋಂಡಾ ಸಿಟಿ ಕಾರು ಹಾಗೂ ಗಾಂಜಾ ಮಾರಾಟದ ಸಂಪರ್ಕಕ್ಕಾಗಿ ಬಳಸುತ್ತಿದ್ದ ವಿವೋ-12 ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ-1985ರ ಕಲಂ 8(c) ಹಾಗೂ 20(b)(ii)A ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

Please Share: