ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ತಾಲೂಕಿನ ವಿವಿಧೆಡೆ ಪ್ರತ್ಯೇಕ ದಿನಗಳಲ್ಲಿ ನಡೆದ ಮೂರು ಘಟನೆಗಳು ದುರಂತ ಅಂತ್ಯ ಕಂಡಿವೆ. ಟ್ರ್ಯಾಕ್ಟರ್‌ನಿಂದ ಬಿದ್ದು ಚಾಲಕ ಮೃತಪಟ್ಟರೆ, ಸಾಲದ ಚಿಂತೆಯಿಂದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿಸಲಕೊಪ್ಪದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ಉಲ್ಲಾಳ ಗ್ರಾಮದ ಶ್ರೀಕಾಂತ ರಾಮಾ ಪೂಜಾರಿ (38) ಮೃತಪಟ್ಟಿದ್ದಾರೆ. ಬಿಸಲಕೊಪ್ಪದಿಂದ ಉಲ್ಲಾಳ ಕಡೆಗೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್‌ನ ಎಡಭಾಗದ ಬಿಡಿಭಾಗ ಸರಿಪಡಿಸಲು ಮುಂದಾದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಟ್ರ್ಯಾಕ್ಟರ್‌ನ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲದ ವಿಚಾರವಾಗಿ ಚಿಂತೆಯಲ್ಲಿದ್ದ ಕರೆಗುಂಡಿ ರಸ್ತೆಯ ಹನುಮಗಿರಿ 13ನೇ ಕ್ರಾಸ್‌ನ ಸಲ್ಮಾನ್ ಫಯಾಜ್ ಬೇಗ್ (31) ವಿಷಪದಾರ್ಥ ಸೇವಿಸಿ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆ ಬಳಿಕ ಮಂಗಳೂರಿನ ಎನಪೊಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ.18ರಂದು ಸಂಜೆ ಮೃತಪಟ್ಟಿದ್ದಾರೆ. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ನಗರದ ಬನವಾಸಿ ರಸ್ತೆಯ ದೊಡ್ಡಲುಬಾವಿ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ಸಾಗರ ತಾಲೂಕಿನ ಇಂದುಧರ ದೇವೇಂದ್ರಪ್ಪ (19) ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಬ್ಬಳ್ಳಿ ರಸ್ತೆಯ ಕಾಲೇಜೊಂದರಲ್ಲಿ ಫೈರ್ ಆ್ಯಂಡ್ ಸೇಫ್ಟಿ ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡುತ್ತಿದ್ದ ಅವರು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

 

 

 

 

 

Please Share: