ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸೀಬರ್ಡ್ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸ್ಥಳೀಯ ಅರ್ಹ ಯುವಕರಿಗೆ ಉದ್ಯೋಗ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ಒತ್ತಾಯಿಸಿ ಯುವ ಮುಖಂಡರ ನಿಯೋಗವು ಶಾಸಕ ಸತೀಶ್ ಸೈಲ್ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿತು.

Banner Ad

ಶನಿವಾರ ಕಾರವಾರದಲ್ಲಿ ಸಚಿವರನ್ನು ಭೇಟಿಯಾದ ನಿಯೋಗವು, ಸೀಬರ್ಡ್ ಹಾಗೂ ಕೈಗಾ ಯೋಜನೆಗಳಿಗಾಗಿ ಕಾರವಾರ–ಅಂಕೋಲಾ ಭಾಗದ ಹಲವು ಕುಟುಂಬಗಳು ಕೃಷಿ ಭೂಮಿ, ಮನೆ ಹಾಗೂ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿವೆ. ಆದರೆ ಯೋಜನೆಗಳು ಕಾರ್ಯಾರಂಭ ಮಾಡಿ ಹಲವು ವರ್ಷಗಳಾದರೂ ಸ್ಥಳೀಯ ವಿದ್ಯಾವಂತ ಯುವಕರಿಗೆ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಹೊರಗಿನವರಿಗೆ ಅವಕಾಶ, ಸ್ಥಳೀಯರಿಗೆ ನಿರಾಸೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ಕುಟುಂಬಗಳ ಯುವಕರಿಗೂ ಉದ್ಯೋಗದಲ್ಲಿ ಸೂಕ್ತ ಅವಕಾಶ ಸಿಗಬೇಕು ಎಂದು ಮುಖಂಡರು ಒತ್ತಾಯಿಸಿದರು.

ಸೀಬರ್ಡ್ ಹಾಗೂ ಕೈಗಾದಲ್ಲಿನ ತಾಂತ್ರಿಕ, ತಾಂತ್ರಿಕೇತರ, ಗ್ರೂಪ್‌-ಸಿ ಮತ್ತು ಗ್ರೂಪ್‌-ಡಿ ಹುದ್ದೆಗಳ ಜೊತೆಗೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೇಮಕಾತಿಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಅಣುಶಕ್ತಿ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ಸಚಿವ ಲಕ್ಷ್ಮಣ ಸವದಿ, ವಿಷಯವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಂಬಂಧಪಟ್ಟ ಯೋಜನಾ ಪ್ರಾಧಿಕಾರಗಳೊಂದಿಗೆ ಸಮಾಲೋಚನೆ ನಡೆಸಿ ಸ್ಥಳೀಯ ಯುವಕರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಮನವಿ ಸಲ್ಲಿಕೆ ಸಂದರ್ಭದಲ್ಲಿ ದರ್ಶನ್ ಕೃಷ್ಣಾನಂದ ನಾಯ್ಕ, ನೂತನ್ ಜೈನ್, ನಾಗರಾಜ್ ಗೌಡ, ಅಭಿಷೇಕ್ ರಾಣೆ, ಅಭಿ ಬಾಡ್ಕರ್, ನಾಗರಾಜ್ ಅಮದಳ್ಳಿ, ಸಂತೋಷ್ ನಾಯ್ಕ ಸೇರಿದಂತೆ ಹಲವು ಯುವ ಮುಖಂಡರು ಉಪಸ್ಥಿತರಿದ್ದರು.

Advt

Please Share: