ಕರಾವಳಿ ವಾಯ್ಸ್ ನ್ಯೂಸ್
ಮಂಗಳೂರು: ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ತಂದು ದಾಸ್ತಾನು ಹಾಗೂ ಸಾಗಾಟ ಮಾಡುತ್ತಿದ್ದ ಜಾಲದ ವಿರುದ್ಧ ದಕ್ಷಿಣ ಕನ್ನಡ ಅಬಕಾರಿ ಇಲಾಖೆ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ₹20.37 ಲಕ್ಷ ಮೌಲ್ಯದ 1,450.340 ಲೀಟರ್ ಮದ್ಯ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದೆ.

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪಾಡಿ ಎಂಬಲ್ಲಿ ಅಮಿತ್ ಬಿನ್ ಅಣ್ಣು ಪೂಜಾರಿ ಅವರಿಗೆ ಸೇರಿದ ಜಾಗದಲ್ಲಿ ಸಂಪ್ರಿತ್ ಕಾಸರಗೋಡು ಎಂಬಾತನ ಸಹಭಾಗಿತ್ವದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಗೋವಾ ಮದ್ಯದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮಾಲ್ಟ್ ವಿಸ್ಕಿಯ 146 ಪೆಟ್ಟಿಗೆಗಳಲ್ಲಿ ಒಟ್ಟು 1,261.440 ಲೀಟರ್ ಮದ್ಯ ಪತ್ತೆಯಾಗಿದ್ದು, ₹7,72,340 ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಕಲ್ಲಡ್ಕ ಬಳಿ ಕೇರಳ ನೋಂದಣಿಯ ಎರಡು ಕಾರುಗಳಲ್ಲಿ ಪರವಾನಗಿ ಇಲ್ಲದೆ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಚಂದ್ರಶೇಖರ್ (ಅನ್ನು), ಸಫ್ವಾನ್ ಎಂ. ಹಾಗೂ ಮಹಮ್ಮದ್ ಶಾಫಿನ್ ಎಂಬುವವರನ್ನು ಪತ್ತೆಹಚ್ಚಲಾಗಿದೆ. ಹುಂಡೈ i20 (KL-56-R-2927) ಹಾಗೂ ಮಾರುತಿ ಸುಜುಕಿ ಸ್ವಿಫ್ಟ್ (KL-14-H-7061) ಕಾರುಗಳಲ್ಲಿ 24 ಪೆಟ್ಟಿಗೆಗಳಲ್ಲಿದ್ದ 188.9 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಹಾಗೂ ವಾಹನಗಳ ಒಟ್ಟು ಮೌಲ್ಯ ₹12.65 ಲಕ್ಷ ಎಂದು ಅಂದಾಜಿಸಲಾಗಿದೆ.
ಎರಡೂ ಪ್ರಕರಣಗಳಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ), 40ರ ಉಲ್ಲಂಘನೆಯಡಿ ಕಲಂ 32ರಂತೆ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಹೆಜಮಾಡಿ ಟೋಲ್ ಬಳಿ ಗೋವಾ ಮದ್ಯ ವಶಪಡಿಸಿಕೊಂಡಿದ್ದ ಇದೇ ತಂಡ, ತನಿಖೆ ಮುಂದುವರಿಸಿ ಅಕ್ರಮ ಜಾಲದ ಸುಳಿವು ಆಧರಿಸಿ ಮತ್ತೊಂದು ಕಾರ್ಯಾಚರಣೆ ನಡೆಸಿದೆ.
ಅಬಕಾರಿ ಜಂಟಿ ಆಯುಕ್ತ ಸಿ. ಜಗದೀಶ್ ಅವರ ನಿರ್ದೇಶನ ಹಾಗೂ ದಕ್ಷಿಣ ಕನ್ನಡ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ಅವರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕರಾದ ಸಂತೋಷ್ ಮೊಡಗಿ, ಗಾಯತ್ರಿ ಸಿ.ಎಚ್. ಸೇರಿದಂತೆ ಬಂಟ್ವಾಳ, ಮಂಗಳೂರು ಹಾಗೂ ಬೆಳ್ತಂಗಡಿ ವಲಯದ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಕ್ರಮ ಮದ್ಯ ದಾಸ್ತಾನು ಮತ್ತು ಸಾಗಾಟದ ವಿರುದ್ಧ ನಿರಂತರ ನಿಗಾ ಇರಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ.


