ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಡಿಎಚ್ಒ ಕಚೇರಿಯಿಂದ ಕಾಜುಬಾಗ್ ಕ್ರಾಸ್ವರೆಗೆ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೇ ದುರಸ್ತಿ ಮಾಡಿ ಡಾಂಬರೀಕರಣ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸೂರಜ್ ಕುರುಮಕರ್ ಆಗ್ರಹಿಸಿದ್ದಾರೆ.
ಡಿಎಚ್ಒ ಕಚೇರಿಯಿಂದ ಕಾಜುಬಾಗ್ ಕ್ರಾಸ್ವರೆಗೆ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಮಣ್ಣು ಮುಚ್ಚಲಾಗಿದ್ದು, ರಸ್ತೆ ಸಮತಟ್ಟು ಮಾಡಿ ಡಾಂಬರೀಕರಣ ಮಾಡಬೇಕಾಗಿತ್ತು. ಆದರೆ ಇದುವರೆಗೆ ಡಾಂಬರೀಕರಣ ಕೈಗೊಳ್ಳದ ಕಾರಣ ರಸ್ತೆ ಸಂಚಾರಕ್ಕೆ ತೊಂದರೆಯಾಗುವಂತಾಗಿದೆ.
ರಸ್ತೆಯ ಅವ್ಯವಸ್ಥೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಕೆಲವರು ಗಾಯಗೊಂಡು ಮಂಗಳೂರು, ಮಣಿಪಾಲ ಹಾಗೂ ಗೋವಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೂರಜ್ ಕುರುಮಕರ್ ತಿಳಿಸಿದ್ದಾರೆ.
ಈ ಕುರಿತು ಈ ಹಿಂದೆಯೇ ನಗರಸಭೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಕಾಮಗಾರಿ ನಡೆಸುವ ಭರವಸೆ ನೀಡಲಾಗುತ್ತಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯನ್ನು ಒಂದು ವಾರದೊಳಗೆ ಸರಿಪಡಿಸಿ ಡಾಂಬರೀಕರಣ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸೂರಜ್ ಕುರುಮಕರ್ ಎಚ್ಚರಿಕೆ ನೀಡಿದ್ದಾರೆ.


